

ತುರುವೇಕೆರೆ: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಗಾಳಿ ಮತ್ತು ಗುಡುಗು ಸಹಿತ ಮಳೆಗೆ ತಾಲೂಕಿನಲ್ಲಿ 20ಕ್ಕೂ ಅಧಿಕ ಮರಗಳು ಸೇರಿ ವಿದ್ಯುತ್ ಕಂಬಗಳು ಮುರಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.
ದಂಡಿನಶಿವರ ಹೋಬಳಿ ವ್ಯಾಪ್ತಿಯ ಡಿ.ಹೊಸಹಳ್ಳಿ ಜನತಾ ಕಾಲನಿಯಲ್ಲಿ ಮರದ ಕೊಂಬೆ ಮುರಿದು 1 ವಿದ್ಯುತ್ ಕಂಬ, ಗಿರೇನಹಳ್ಳಿ 4, ಬಳ್ಳೇಕಟ್ಟೆ 2, ಚಾಕುವಳ್ಳಿ 2, ಹೆಗ್ಗೆರೆ 4 ವಿದ್ಯುತ್ ಕಂಬಗಳು ಮುರಿದಿದೆ.
ಗಿರೇನಹಳ್ಳಿಯ ಕನಕಮ್ಮ ಅವರ ಮನೆಯ ಎಂಚುಗಳು ಗಾಳಿಗೆ ಹಾರಿ ಹೋಗಿವೆ. ಅಮ್ಮಸಂದ್ರದ ಪವರ್ ಸ್ಟೇಷನ್ ಮುಭಾಗ ದೊಡ್ಡ ಜಾಲಿ ಮರ ಹಾಗೂ ಗುತ್ತಿಗೆದಾರ ಸುರೇಶ್ ಮನೆಯ ಮುಂದಿನ ಮರದ ಕೊಂಬೆ ಮುರಿದು ಬಿದ್ದಿದೆ.
ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಕೆ.ಮಾವಿನಹಳ್ಳಿ 3, ಸಾದರಹಳ್ಳಿ ಗೊಲ್ಲರಹಟ್ಟಿ 1, ಗುರುವಿನಮಠದಲ್ಲಿ ಟ್ರಾನ್ಸ್ ಫಾರಂ ಸೇರಿ 4 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಸಾದರಹಳ್ಳಿ ಗೊಲ್ಲರಹಟ್ಟಿಯ ವಸಂತ್ ಕುಮಾರ್ ಎಂಬುವರ ತೋಟದಲ್ಲಿ 2 ತೆಂಗಿನ ಮರಗಳು ಬುಡಸಮೇತ ಬಿದ್ದಿವೆ. ಕಸಬಾ ವ್ಯಾಪ್ತಿಯ ಕುಣಿಕೇನಹಳ್ಳಿ ರಂಗನಾಥ್ ಪುರದ ಕುಮಾರಯ್ಯ ಅವರ ವಾಸದ ಮನೆಯ ಶೀಟ್ ಗಾಳಿಗೆ ಹಾರಿಹೋಗಿ ಮನೆಯ ವಸ್ತುಗಳು ನೀರಿನಿಂದ ತೆಪ್ಪೆಯಾಗಿವೆ.
ಪಟ್ಟಣದ ಮಸರುಕೊಟ್ಟಿಗೆಯಲ್ಲಿ ಟ್ರಾನ್ಸ್‌ಫಾರ್ಮಾರ್ ಸೇರಿ 7 ವಿದ್ಯುತ್ ಕಂಬಗಳು ಮುನಿಯೂರು 2 ವಿದ್ಯುತ್ ಕಂಬಗಳು ಮುರಿದು ನೆಲಕ್ಕುರುಳಿವೆ. ಮೀನಾಕ್ಷಪುರದಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ತಂತಿ ತುಂಡರಿಸಿವೆ. ತಾಲೂಕು ಕಚೇರಿ ಆವರಣದಲ್ಲಿದ್ದ ಬೇವಿನಮರ ಮುರಿದು ಬಿದ್ದಿದೆ. ಮಾಯಸಂದ್ರ ರಸ್ತೆಯಲ್ಲಿನ ಕೋಳಿಯಂಗಡಿಗೆ ಚರಂಡಿ ನೀರು ನುಗ್ಗಿದೆ. ವಿದ್ಯುತ್ ಕಂಬಗಳು ಮಳೆಗಾಳಿ ಹಾನಿಯಿಂದಾಗಿ ಪಟ್ಟಣ ಸೇರಿ ತಾಲೂಕಿನ ಹಲವೆಡೆ ಸೋಮವಾರ ರಾತ್ರಿ ವಿದ್ಯುತ್ ವ್ಯತ್ಯಯವಾಗಿತ್ತು.
ಬೆಸ್ಕಾಂ ಶಾಖಾಧಿಕಾರಿಗಳಾದ ಸೋಮಶೇಖರ್, ಉಮೇಶ್ವರಯ್ಯ, ಗಿರೀಶ್, ಕಾಂತರಾಜು ಗ್ರಾಮಲೆಕ್ಕಾಧಿಕಾರಿ ಷಾಹನೂರು ಅಲಿ, ಸಿಬ್ಬಂದಿ ಪ್ರಕಾಶ್, ಶಿವಶಂಕರ್, ಪವನ್, ಮುಜಾಹೀರ್‌ಪಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ್ದಾರೆ.