

ಬೆಳಗಾವಿ: ನಗರದ ಪ್ರತಿಷ್ಠಿತ ಬಡಾವಣೆ ಎಂದು ಕರೆಯಿಸಿಕೊಳ್ಳುವ ‘ರಾಮತೀರ್ಥ ನಗರ’ವು 27 ವರ್ಷ ಉರುಳಿದರೂ ಸಮಸ್ಯೆಗಳ ಸುಳಿಯಿಂದ ಹೊರ ಬರುತ್ತಿಲ್ಲ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಂದು ಸೀಮಿತ ಹಣದಲ್ಲಿ ರಾಮತೀರ್ಥ ನಗರ ಬಡಾವಣೆ ನಿರ್ಮಿಸಿದೆ. ಹೀಗಾಗಿ ಒಳಚರಂಡಿ, ರಸ್ತೆ ಸೇರಿ ಪೂರ್ಣ ಪ್ರಮಾಣದಲ್ಲಿ ಮೂಲಸೌಲಭ್ಯ ಕಲ್ಪಿಸುವ ಕಾರ್ಯಗಳು ಬಾಕಿ ಉಳಿದಿವೆ. ಹೀಗಾಗಿ ಎರಡೂವರೆ ದಶಕ ಕಳೆದರೂ ಈ ಬಡಾವಣೆ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಬುಡಾ ಕಲ್ಪಿಸಿರುವ ಕನಿಷ್ಠ ಸೌಲಭ್ಯಗಳಲ್ಲೇ ನಿವಾಸಿಗಳು ಬದುಕುತ್ತಿದ್ದಾರೆ. ಬಡಾವಣೆ ನಿರ್ಮಾಣವಾಗಿ ದಶಕ ಕಳೆದ ಬಳಿಕ ಅಲ್ಲಲ್ಲಿ ಗಟಾರು, ಒಳಚರಂಡಿ, ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಯಿತಾದರೂ ಪೂರ್ಣ ಪ್ರಮಾಣದಲ್ಲಿ ಕಲ್ಪಿಸಲು ಸಾಧ್ಯವಾಗಲಿಲ್ಲ. ಈಗ ಕಳೆದ ಒಂದು ವರ್ಷದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 28 ಕಿ.ಮೀ.ವರೆಗೆ ಗಟಾರು, ರಸ್ತೆ ನಿರ್ಮಾಣದ ಜತೆಗೆ 7 ಉದ್ಯಾನಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಶೇ. 30ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಈ ಬಡಾವಣೆಯು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಲಿದೆ. ಅಲ್ಲಿಯವರೆಗೂ ನಿವಾಸಿಗಳು ಕನಿಷ್ಠ ಸೌಲಭ್ಯದಲ್ಲೇ ಬದುಕುವುದು ಅನಿವಾರ್ಯವಾಗಿದೆ.
ಹತ್ತು-ಹಲವು ಸಮಸ್ಯೆಗಳು:
ಬಡಾವಣೆಯ ಕೆಲ ಕಡೆಗಳಲ್ಲಿ ಸಣ್ಣ ಸಣ್ಣ ಗಟಾರುಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಹೂಳು ಹಾಗೂ ಕೊಳಚೆ ನೀರು ಸಂಗ್ರಹಗೊಂಡು ಸ್ಲಂ ಪ್ರದೇಶವೆಂಬಂತೆ ಗೋಚರವಾಗುತ್ತಿವೆ. ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳ ಅಕ್ಕ-ಪಕ್ಕ ತ್ಯಾಜ್ಯ ನೀರು ಸಂಗ್ರಹವಾಗುತ್ತಿದೆ. ನಗರವನ್ನು ಸ್ವಚ್ಛ-ಸುಂದರವಾಗಿಟ್ಟುಕೊಳ್ಳುವ ದೃಷ್ಟಿಯಿಂದ ಕಸ ವಿಲೇವಾರಿಗೆ ಪಾಲಿಕೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ರಾಮತೀರ್ಥ ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. 2-3 ದಿನಗಳಿಗೊಮ್ಮೆ ಇಲ್ಲಿಂದ ಕಸ ವಿಲೇವಾರಿ ಆಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ಈ ಬಡಾವಣೆಯಲ್ಲಿ ಹಾಯ್ದು ಹೋಗಿರುವ ನಾಲಾದಲ್ಲಿ ಆಟೋನಗರ ಕೈಗಾರಿಕಾ ಪ್ರದೇಶದ ರಸಾಯನಿಕಯುಕ್ತ ನೀರು ಹರಿದು ಹೋಗುತ್ತಿದ್ದು, ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಡಾವಣೆಗೆ ಸ್ಮಶಾನ ಇಲ್ಲ:
ರಾಮರ್ತೀ ನಗರ 15 ಸಾವಿರ ಜನಸಂಖ್ಯೆ ಹೊಂದಿದ್ದು, 9 ಸಾವಿರ ಮತದಾರರಿದ್ದಾರೆ. ಈ ಬಡಾವಣೆಗೆ ಮುಖ್ಯವಾಗಿ ಸ್ಮಶಾನ ಇಲ್ಲ. ಯಾರಾದರೂ ಮೃತಪಟ್ಟರೆ ಸದಾಶಿವ ನಗರ ಅಥವಾ ರುಕ್ಮಣಿ ನಗರದ ಸ್ಮಶಾನಕ್ಕೆ ಹೋಗಿ ಅಂತ್ಯಕ್ರಿಯೆ ಮಾಡುವ ಅನಿವಾರ್ಯತೆ ಇದೆ. ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಸಮರ್ಪಕವಾಗಿ ಬಸ್ ಸೌಲಭ್ಯ, ಗ್ರಂಥಾಲಯ ಸೌಲಭ್ಯ ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲ ಎಂದು ಜನರು ದೂರುತ್ತಾರೆ.
ರಸ್ತೆ ಸಮರ್ಪಕವಾಗಿಲ್ಲ:
ರಾಮತೀರ್ಥ ನಗರ ಚನ್ನಬಸವೇಶ್ವರ ಬಡಾವಣೆ, ಶಿವಶಕ್ತಿ ಬಡಾವಣೆಯಲ್ಲಿ ರಸ್ತೆಗಳು ನಿರ್ಮಾಣವಾಗಿಲ್ಲ. ರಾಮತೀರ್ಥ ನಗರ ಕೆಇಬಿ ಸ್ಟೇಷನ್‌ನಿಂದ ಗಣೇಶ ವೃತ್ತಕ್ಕೆ ಹೋಗುವ ರಸ್ತೆಯನ್ನು ಅರ್ಧ ಮಾಡಿ ಹಾಗೆ ಬಿಟ್ಟಿದ್ದಾರೆ. ಪಕ್ಕದಲ್ಲಿರುವ ಉದ್ಯಾನದ ನಿರ್ವಹಣೆಯಾಗುತ್ತಿಲ್ಲ. ಉದ್ಯಾನದ ಓಪನ್ ಜಿಮ್ ಪರಿಕರಗಳು ಮುರಿದಿವೆ.