

ಉಡುಪಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿದ್ದು, ಎಲ್ಲೆಡೆ ರಾಮಸ್ಮರಣೆ ನಡೆಯುತ್ತಿದೆ. ಆದರೆ ಉಡುಪಿ ಸಮೀಪ ರಾಮನ ಹೆಸರಿನಿಂದಲೇ ಗುರುತಿಸಲ್ಪಟ್ಟ ಊರಿನಲ್ಲಿ ರಾಮದೇವರ ಮಂದಿರವೇ ಜೀರ್ಣಾವಸ್ಥೆ ತಲುಪಿರುವುದು ಆಸ್ತಿಕವರ್ಗಕ್ಕೆ ನೋವಿನ ಸಂಗತಿಯಾಗಿದೆ.
ಉಡುಪಿ ತಾಲೂಕಿನ ಅಲೆವೂರು ಗ್ರಾಮದ ರಾಂಪುರ ಎಂಬ ಸಣ್ಣ ಪ್ರದೇಶದಲ್ಲಿ 5 ಶತಮಾನಗಳ ಇತಿಹಾಸ ಹೊಂದಿರುವ ರಾಮಮಂದಿರ ಶಿಥಿಲಗೊಂಡು ಸಂಪೂರ್ಣವಾಗಿ ಜೀರ್ಣಾವಸ್ಥೆಗೆ ತಲುಪಿದೆ. ಆದರೆ ಈ ಆಲಯದಲ್ಲಿರುವ ಹಿತ್ತಾಳೆಯ ಸೀತಾ ಸಹಿತ ರಾಮದೇವರ ಪುರಾತನ ಮೂರ್ತಿ ನೋಡಲು ಆಕರ್ಷಕವಾಗಿದೆ. ಇದರ ಹಿಂಭಾಗದಲ್ಲಿ ರಾಮದೇವರ ಉಬ್ಬುಶಿಲ್ಪಗಳಿದ್ದು, ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ದೇವಾಲಯ ಖಾಸಗಿ ಪ್ರದೇಶದಲ್ಲಿದ್ದು, ಕಾಲಂತರದಲ್ಲಿ ವಿವಿಧ ಕಾರಣಗಳಿಂದ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಇಡೀ ಗ್ರಾಮಕ್ಕೆ ಈ ದೇವಾಲಯ ಮುಕುಟ ಪ್ರಾಯವಾಗಿತ್ತು. ಇದೀಗ ಈ ದೇವಾಲಯದ ಪುನರ್ ನಿಮಾರ್ಣಕ್ಕೆ ಒತ್ತಾಯಗಳು ಕೇಳಿಬರುತ್ತಿವೆ. ಪ್ರತಿ ದಿನ ಇಲ್ಲಿ ಆಸಕ್ತ ಜನರು ಭೇಟಿ ಕೊಡುತ್ತಿದ್ದಾರೆ. ಅರ್ಚಕರೊಬ್ಬರು ಪ್ರತಿದಿನ ಬೆಳಗ್ಗೆ ದೇವರಿಗೆ ದೀಪ ಹಚ್ಚಿ, ಹೂವಿಟ್ಟು ತೆರಳುತ್ತಿದ್ದಾರೆ.
ದೇವಾಲಯದ ಕಂಬಗಳು ಧರಾಶಾಹಿಯಾಗಿದ್ದು, ಸುತ್ತುಪೌಳಿ ನಶಿಸಿಹೋಗಿದೆ. ಒಳಗಡೆ ಗೋಡೆಗಳಲ್ಲಿ ಗೆದ್ದಲು ಹಿಡಿದಿವೆ. ಸ್ಥಳಿಯ ಅನೇಕ ಮಂದಿ ದೇವಸ್ಥಾನದ ಜೀಣೋರ್ದ್ಧಾರೆಕ್ಕೆ ಆಸಕ್ತಿ ವಹಿಸಿದ್ದರೂ ಖಾಸಗಿ ಸ್ಥಳವಾಗಿರುವುದರಿಂದ ಸಂಬಂಧಪಟ್ಟವರ ಅನುಮತಿ ಪಡೆದು ಮುಂದುವರಿಯುವುದು ಕಷ್ಟಕರವಾಗುತ್ತಿದೆ. ಜಾಗಕ್ಕೆ ಸಂಬಂಧಪಟ್ಟವರು ಪರವೂರಿನಲ್ಲಿ ಇರುವುದರಿಂದ ದೇವಾಲಯದ ಅಭಿವೃದ್ಧಿ ಈವರೆಗೂ ನಡೆದಿಲ್ಲ ಎಂಬ ಮಾಹಿತಿ ಇದೆ .
ದೇವಾಲಯದ ಕಾರಣದಿಂದ ಈ ಪ್ರದೇಶಕ್ಕೆ ರಾಮಪುರ ಅಥವಾ ರಾಂಪುರ ಎಂಬ ಹೆಸರು ಬಂದಿತ್ತು. ಗ್ರಾಮದ ಹೆಸರಿಗೆ ಕಾರಣವಾದ ಈ ಮಂದಿರದ ಗತವೈಭವ ಮತ್ತೆ ಮರುಕಳಿಸಬೇಕು. ರಾಮಮಂದಿರ ಖಾಸಗಿ ಸ್ಥಳದಲ್ಲಿ ಇರುವುದರಿಂದ ಜೀಣೋರ್ದ್ಧಾರಕ್ಕೆ ಸಂಬಂಧಿಸಿ ಜಾಗದ ಯಜಮಾನರೇ ಮುತುವರ್ಜಿವಹಿಸಬೇಕು. ಇದಕ್ಕೆ ಸ್ಥಳಿಯರು ಸಾಥ್ ನೀಡಲಿದ್ದಾರೆ. ಆದರೆ ಜಾಗಕ್ಕೆ ಸಂಬಂಧಪಟ್ಟವರು ಅನೇಕ ದಶಕಗಳಿಂದ ಪರವೂರಿನಲ್ಲಿದ್ದು, ಸುಲಭದಲ್ಲಿ ಸಂಪರ್ಕ ಸಾಧ್ಯವಾಗುತ್ತಿಲ್ಲ.