ಸರ್ಕಾರಿ ನೌಕರರ ತವರೂರು ರಾಂಪುರ

IMG-20240407-WA0008
Published on

* ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ದೇಶಗಳಿಗೆ ವಿಳ್ಯದೆಲೆ ರಫ್ತು

ಅಭಿಲಾಷ್ ತಿಟ್ಟಮಾರನಹಳ್ಳಿ. ಚನ್ನಪಟ್ಟಣ

ಚನ್ನಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ದೊಡ್ಡಗ್ರಾಮಗಳಲ್ಲಿ ರಾಂಪುರ ಗ್ರಾಮ ಒಂದಾಗಿದ್ದು, ವಿದ್ಯಾವಂತರ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿರುವ ಜತೆಗೆ ಅತಿಹೆಚ್ಚು ಸರ್ಕಾರಿ ನೌಕರರನ್ನು ಒಳಗೊಂಡಿರುವ ಗ್ರಾಮ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. 

ಹೌದು. ನಗರದ ವಾಯುವ್ಯ ದಿಕ್ಕಿಗೆ 3 ಕಿಮೀ ದೂರವಿರುವ ರಾಂಪುರ ಗ್ರಾಮಕ್ಕೆ ನೂರಾರು ವರ್ಷದ ಇತಿಹಾಸವಿದೆ. ಗ್ರಾಮದ ಪೂರ್ವಕ್ಕೆ ಬುಂಡೆ ಹಳ್ಳ ಮತ್ತು ತಾವರೆಕೆರೆ, ಉತ್ತರಕ್ಕೆ ಕಣ್ವ ಕಾಲುವೆ ಮತ್ತು ಮೊಗುಕಟ್ಟೆ, ಪಶ್ಚಿಮಕ್ಕೆ ಕಣ್ವ ಕಾಲುವೆ ಹಾಗೂ ದಕ್ಷಿಣದಲ್ಲಿ ಗೆಂಡೆ ಮಡುವು ಹಳ್ಳ ಮತ್ತು ರಾಮಮ್ಮನ ಕೆರೆಯಿದೆ. ನಾಲ್ಕು ಮೂಲೆಯಿಂದಲೂ ನೀರಿನಿಂದ ಆವೃತ್ತವಾಗಿರುವ ಈ ಗ್ರಾಮ ದ್ವೀಪದಂತೆ ಗೋಚರಿಸುವುದು ವಿಶೇಷ. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮದಲ್ಲಿ ಅತಿಹೆಚ್ಚಾಗಿ ಬೆಳೆಯಲಾಗುತ್ತಿದ್ದ ವೀಳ್ಯದೆಲೆಯನ್ನು ಹಲವು ದೇಶಗಳಿಗೆ  ರಪ್ತು ಮಾಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಎಲೆ ರಾಂಪುರ ಎಂತಲೂ ಕರೆಯಲಾಗುತ್ತದೆ.

ವಿದ್ಯಾವಂತರ ಗ್ರಾಮ:

ತಾಲೂಕಿನಲ್ಲಿಯೇ ಹೆಚ್ಚಿನ ಸಂಖ್ಯೆಯ ವಿದ್ಯಾವಂತರನ್ನು ಹೊಂದಿರುವ ಗ್ರಾಮ ಎಂಬ ಹೆಗ್ಗಳಿಕೆ ರಾಂಪುರ ಹೊಂದಿದೆ. ಗ್ರಾಮದ ಬಹುತೇಕರ ಮನೆಯಲ್ಲಿ ಪದವೀಧರರನ್ನು ಕಾಣಬಹುದಾಗಿದೆ. ಗ್ರಾಮದಲ್ಲಿ ಸರ್ಕಾರಿ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಿರುವುದು ಮತ್ತೊಂದು ವಿಶೇಷ.

ಅಧಿಕಾರಿಗಳ ತವರೂರು:

ವಿಧಾನಸೌಧ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿ ವೆಂಕಟೇಶಯ್ಯ, ಡಿವೈಎಸ್ಪಿಯಾಗಿ ಲೋಕೇಶ್ ಕುಮಾರ್, ರಾಜ್ಯ ನಗರ ಯೋಜನಾಧಿಕಾರಿಯಾಗಿ ದಿ. ಮಲವಯ್ಯ, ಮಂಡ್ಯ ನಗರಸಭಾ ಕಮಿಷನರ್ ಆಗಿ ರಾಮಸ್ವಾಮಿ, ರೇಷ್ಮೆ ಇಲಾಖೆ ಡಿಡಿಯಾಗಿ ರಾಮಸ್ವಾಮಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉಪಕಾರ್ಯದರ್ಶಿಯಾಗಿದ್ದ ದಿ.ರಾಮಸಂಜೀವಯ್ಯ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ವೆಂಕಟೇಗೌಡ, ರೈಲ್ವೆ ಪೊಲೀಸ್ ಅಧಿಕಾರಿಯಾಗಿ ಮಲ್ಲೇಶ್ (ರಾಷ್ಟ್ರಪತಿ ಪದಕ ಪುರಸ್ಕೃತ) ವಿಶೇಷ ಭೂ ಸ್ವಾಧೀನ ಇಲಾಖೆಯ ಅಧಿಕಾರಿಯಾಗಿ ವೆಂಕಟಪ್ಪ, 

ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಆರ್.ವಿ. ವೆಂಕಟಾಚಲ, ಲೋಕೋಪಯೋಗಿ ಇಲಾಖೆಯ ಇಇಯಾಗಿ ಆರ್.ವಿ. ವಿಜಯ ಗೋಪಾಲ್, ಆರೋಗ್ಯ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಜಯರಾಂ, ಬಿಡಿಎ ಅಧೀಕ್ಷಕರಾಗಿ ಆರ್.ಎಸ್.ಕೃಷ್ಣಪ್ಪ, ಬಿಡಿಎ ಇಇಯಾಗಿ ಕಾಂತರಾಜು, ಸಹಕಾರ ಇಲಾಖೆ ಸಹಾಯಕ ರಿಜಿಸ್ಟರ್ ಆಗಿ ರಾಮಚಂದ್ರು, ಪಿಎಸ್‌ಐ ಆಗಿ ಬೋರಯ್ಯ, ಕೇಂದ್ರ ಅಬಕಾರಿ ಇಲಾಖೆ ಅಧಿಕಾರಿಯಾಗಿ ಪುಟ್ಟರಾಮು, ಲೋಕೋಪಯೋಗಿ ಉನ್ನತ ಅಧಿಕಾರಿಯಾಗಿ ಶಿವಮಲವಯ್ಯ, ಮೈಸೂರು ವಿವಿಯ ರಿಜಿಸ್ಟರ್ ಆಪ್ತ ಸಹಾಯಕರಾಗಿ ಆರ್.ಟಿ. ಶ್ರೀನಿವಾಸ್ ಸೇರಿ ಹಲವು ಮಂದಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ದಿ. ಮರಿಲಿಂಗಯ್ಯ ಎಂಬುವವರು ಅಬಕಾರಿ ಇಲಾಖೆಯ ಸೂಪರಿಂಟೆಂಡೆಂಟ್ ಜತೆಗೆ ಬೆಂಗಳೂರು ರೇಸ್ ಕೋರ್ಸ್ ಹಾಗೂ ಚೆನೈ ರೇಸ್‌ಕೋರ್ಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ದಿ. ತಮ್ಮಯ್ಯ ಎಂಬುವರು ಬಹಳ ವರ್ಷದ ಹಿಂದೆಯೇ ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

1914ರಲ್ಲಿ ಮೈಸೂರು ದೊರೆಗಳಿಂದ ಗ್ರಾಮದಲ್ಲಿ ಆರಂಭವಾದ ನ್ಯೂ ಟೈಪ್ ಮಿಡಲ್ ಸ್ಕೂಲ್ ಕಾರಣದಿಂದಾಗಿ ನಮ್ಮ ಗ್ರಾಮ ವಿದ್ಯಾವಂತರ ತವರೂರು ಎನಿಸಿಕೊಂಡಿದೆ. ಸರ್ಕಾರಿ ಅಧಿಕಾರಿಗಳಾಗಿ, ನೌಕರರಾಗಿ ಗ್ರಾಮದ ನೂರಾರು ಮಂದಿ ಸೇವೆ ಸಲ್ಲಿಸಿರುವುದು ನಮ್ಮ ಗ್ರಾಮದ ಹೆಮ್ಮೆಯ ವಿಚಾರ ಎನ್ನುತ್ತಾರೆ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಧರಣೇಶ್, ಮುಖಂಡರಾದ ರಾಂಪುರ ರಾಜಣ್ಣ, ಆರ್.ವಿ.ಸ್ವಾಮಿ ಹಾಗೂ ಸಾಹಿತಿ ವಿಜಯ್ ರಾಂಪುರ.

ಪ್ರಸುತ್ತ ತುಮಕೂರು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿ.ಮರಿಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಸಿದ್ದರಾಜು, ಪಶುವೈದ್ಯರಾಗಿ ಡಾ. ರವಿ ಸೇರಿ ಈಗಲೂ ಹಲವು ಮಂದಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೈನ್ಯದಲ್ಲೂ ಗ್ರಾಮದ ಸಿಪಾಯಿ ರಾಮು, ಕೃಷ್ಣ, ಗೋಪಾಲ್,  ಸಿದ್ಧರಾಜು(ಇಂಜಿನಿಯರ್) ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಮಲವೇಗೌಡ, ಡಾ.ಪ್ರಮೀಳಾ ಸಿದ್ದಯ್ಯ, ಸಾಹಿತ್ಯ ಕ್ಷೇತ್ರದಲ್ಲಿ ವಿಜಯ್ ರಾಂಪುರ (ಕಜಾಪ ತಾಲೂಕು ಅಧ್ಯಕ್ಷ), ಶ್ರೀನಿವಾಸ್ (ಕಸಾಪ ತಾಲೂಕು ಅಧ್ಯಕ್ಷ) ತೊಡಗಿಸಿಕೊಳ್ಳುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ನಾದಸ್ಪರ ವಾದಕರಾಗಿ ಗ್ರಾಮದ ದಿ.ಸುಭಾಷ್ ಸಾಕಷ್ಟು ಹೆಸರುಗಳಿಸಿದ್ದರು.

ಸಹಬಾಳ್ವೆಯ ಜೀವನ

ಗ್ರಾಮದಲ್ಲಿ ಮಾಗಡಿ ಮಲವೇಶ್ವರ, ಕೋಟೆ ಮಾರಮ್ಮ, ತ್ರಿಪುರ ಸುಂದರಿ, ಅಭಯ ಆಂಜನೇಯ, ಕಲಾದೇವಿ, ಬಸವೇಶ್ವರ, ಲಕ್ಷ್ಮೀ ದೇವಸ್ಥಾನ, ಸಿದ್ದಪ್ಪಾಜಿ, ಚಿಕ್ಕಮ್ಮತಾಯಿ ಸೇರಿ 12 ದೇವಸ್ಥಾನಗಳಿವೆ. ಗ್ರಾಮದಲ್ಲಿ ಸರ್ವಜನಾಂಗಗಳು ಸಮನ್ವಯ ಹಾಗೂ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿವೆ. ಜಾತಿ ತಾರತಮ್ಯ ಇಲ್ಲದೇ ಸರ್ವಜನರಿಗೂ ದೇವಾಲಯ ಪ್ರವೇಶ ಬಹಳ ಹಿಂದಿನಿಂದಲೂ ಇರುವುದು ಈ ಗ್ರಾಮದ ವಿಶೇಷತೆ. ದಲಿತರು ಪೂಜಿಸುವ ಜ್ಯೋತಿಗುಡಿ (ದೇವತೆಗುಡಿ) ಸವರ್ಣೀಯರ ಕೇರಿಯಲ್ಲಿರುವುದು ಇದಕ್ಕೆ ಉದಾಹರಣೆಯಾಗಿದೆ.

ದಾನ ದತ್ತಿ ಶಾಸನ

ಗ್ರಾಮದ ಮುಂಭಾಗ ಬೃಹತ್ ಅರಳಿಕಟ್ಟೆಯಿದ್ದು, ಬಹುಶಃ ಇಡೀ ತಾಲೂಕಿನಲ್ಲಿಯೇ ಇದು ಬೃಹತ್‌ಗಾತ್ರದ ಅರಳಿಮರ ಎನ್ನಬಹುದು. ಇಲ್ಲಿಯೇ ಕ್ರಿ.ಶ. 950 ರಲ್ಲಿ ತಾವರೆಕೆರೆಯ ನೀರು ನಿರ್ವಹಣೆ ಮಾಡುವ ನೀರು ಗಂಟಿಗಳಿಗೆ ಭೂಮಿ ನೀಡಿರುವ ಬಗ್ಗೆ ದಾನ ದತ್ತಿ ಶಾಸನವಿದೆ. ಇದರೊಂದಿಗೆ, ಗ್ರಾಮದಲ್ಲಿ ವೀರಗಲ್ಲು, ಮಾಸ್ತಿಕಲ್ಲು ಮತ್ತು ತೂತುಗಲ್ಲುಗಳನ್ನು ಕಾಣಬಹುದಾಗಿದೆ.

1936ರಲ್ಲಿ ಗ್ರಾಮದ ದಲಿತ ಕೇರಿಗಳಿಗೆ ಭೂದಾನ ಚಳವಳಿಯ ನೇತಾರ ಆಚಾರ್ಯ ವಿನೋಬಾ ಭಾವೆ ಸಹ ಭೇಟಿ ನೀಡಿದ್ದಾರೆ. ಗ್ರಾಮದ ಹೊರವಲಯದಲ್ಲಿ 13 ಎಕರೆ ನೆಡು ತೋಪು (ಗುಂಡು ತೋಪು) ಇದ್ದು ಇಲ್ಲಿಯೇ ಸ್ಮಶಾನವಿದೆ. ಗ್ರಾಮದ ಎಲ್ಲ ಜನರಿಗೂ ಒಂದೆಡೆಯೇ ಸ್ಮಶಾನವಿರುವುದು ಮತ್ತೊಂದು ವಿಶೇಷ.

ರಾಜಕೀಯದಲ್ಲೂ ಛಾಪು

ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮ ತಾಲೂಕು ರಾಜಕೀಯದಲ್ಲೂ ತನ್ನದೆ ಆದ ಛಾಪು ಮೂಡಿಸಿದೆ. ಈ ಹಿಂದೆ ಗ್ರಾಮದ ಹಿರಿಯ ಮುಖಂಡರಾಗಿದ್ದ ಶಿವರಾಮಯ್ಯ ಜನತಾ ಪಕ್ಷದಿಂದ ಎರಡು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಇವರೊಂದಿಗೆ, ಆರ್.ಲಿಂಗಯ್ಯ ಎಂಬುವವರು ಜನತಾದಳ ಯು ಪಕ್ಷದಿಂದ ಹಾಗೂ ಆರ್.ಟಿ. ಕೃಷ್ಣ ಮತ್ತು ಆರ್.ಎಂ ಸಿದ್ದಯ್ಯ ಶಾಸಕ ಸ್ಥಾನಕ್ಕೆ ಸ್ಪರ್ಧೆಯೊಡ್ಡಿದ್ದರು. ಗ್ರಾಮದ ಮಲವೇಗೌಡರು ಕಾಂಗ್ರೆಸ್ ಅಧ್ಯಕ್ಷರಾಗಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಯಮ್ಮ ಎಂಬುವವರು ತಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸುತ್ತ ಸರ್ಮಮಂಗಳ ಲೋಕೇಶ್ ಎಂಬುವವರು ಚನ್ನಪಟ್ಟಣ ನಗರಸಭಾ ಸದಸ್ಯರಾಗಿದ್ದಾರೆ. ನಮ್ಮ ಗ್ರಾಮ ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದಿದ್ದರೂ ಸಹ ನಮ್ಮ ಗ್ರಾಮಕ್ಕೆ ಇಂದಿಗೂ ಸಾರಿಗೆ ಸಂಪರ್ಕ ಇಲ್ಲದಿರುವುದು ಬೇಸರ ಎನ್ನುತ್ತಾರೆ ಪತ್ರಕರ್ತ ರಾಜೇಶ್ ರಾಂಪುರ, ಕನ್ನಡಪರ ಹೋರಾಟಗಾರ ರಾಂಪುರ ಯೋಗೀಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net