ರಾಂಪೂರ ನಾಲೆಗೆ ನೀರು ಹರಿಸದಿದ್ದರೆ ಮತದಾನ ಬಹಿಷ್ಕಾರ

15LNG01
Published on

ಲಿಂಗಸುಗೂರು: ರಾಂಪೂರ ಏತನೀರಾವರಿ ಯೋಜನೆ ನಾಲೆಗಳಿಗೆ ಏ.21 ರವರೆಗೆ ನೀರು ಹರಿಸದಿದ್ದರೆ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ (ಕೋಡಿಹಳ್ಳಿ ಬಣ) ತಾಲೂಕು ಅಧ್ಯಕ್ಷ ಶಿವಪುತ್ರಗೌಡ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಬಿಜೆಎನ್‌ಎಲ್ ಅಧಿಕಾರಿಗಳು ಏ.21 ರವರೆಗೆ ನೀರು ಹರಿಸಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದು, ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆದ ಶೇಂಗಾ, ಭತ್ತ ಸೇರಿ ಇತರ ಬೆಳೆಗಳು ಒಣಗಲಿವೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ನೀರಾವರಿ ಸಲಹಾ ಸಮಿತಿ ಸಭೆಗೆ ಈ ಭಾಗದ ರೈತರನ್ನು ಆಹ್ವಾನಿಸುವ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ತೋರಲಾಗಿದೆ. ಜನಪ್ರತಿನಿಧಿಗಳು ಚುನಾವಣೆ ಟಿಕೆಟ್ ಪಡೆಯುವಲ್ಲಿ ನಿರತರಾಗಿದ್ದು, ರೈತರ ಸಂಕಷ್ಟ ಕೇಳುವವರಿಲ್ಲದಂತಾಗಿದೆ. ಏ.21 ರವರೆಗೆ ನಾಲೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಸಂಗನಗೌಡ, ಖಾಜಾವಲಿ, ಸಹದೇವಪ್ಪ, ಜಾಫರಸಾಬ್, ಉಸ್ಮಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net