ಮಹಿಳೆಯಿಂದ ರಂಪಾಟ, ಸಂಚಾರಕ್ಕೆ ಅಡ್ಡಿ

28bkl5- WOMEN
Published on

ಭಟ್ಕಳ: ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆಯೊಬ್ಬರು ಬುಧವಾರ ಬೆಳಗ್ಗೆ ಇಲ್ಲಿನ ಸರ್ಕಲ್​ನಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ರಂಪಾಟ ನಡೆಸಿದ್ದು, ಮಹಿಳೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.


ಬೆಳಗ್ಗೆ ಶಾಲೆ- ಕಾಲೇಜು, ಕಚೇರಿಗೆ ತೆರಳುವ ತರಾತುರಿಯಲ್ಲಿದ್ದ ವಾಹನ ಸವಾರರು ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆಯಿಂದ ತೊಂದರೆ ಅನುಭವಿಸುವಂತಾಯಿತು. ರಸ್ತೆಯ ಬದಿ ಸಾಗುತ್ತಿರುವ ಮಹಿಳೆ ಏಕಾಏಕಿ ದೊಡ್ಡ ದೊಡ್ಡ ವಾಹನಗಳ ಎದುರು ಬಂದು ಚಾಲಕರಲ್ಲಿ ಭಯವನ್ನುಂಟು ಮಾಡುತ್ತಿದ್ದಳು. ಪೊಲೀಸರಿಗೆ ದೂರು ನೀಡಿದ ನಂತರ ಮಹಿಳಾ ಪೊಲೀಸರು ಸ್ಥಳಕ್ಕೆ ಬಂದರು. ಸರ್ಕಲ್​ನಿಂದ ಸಾಗಹಾಕಿದ ಬಳಿಕ ತಲಾಂದ ರಸ್ತೆಯಲ್ಲೂ ಮಹಿಳೆಯ ವರ್ತನೆಯಿಂದ ಜನರು ಭೀತರಾಗಿದ್ದರು. ದೈಹಿಕವಾಗಿ ಪ್ರಬಲವಾಗಿದ್ದ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಆಕೆಯನ್ನು ಹಿಡಿಯಲು ಹೋದ ಮಹಿಳಾ ಪೊಲೀಸರೊಂದಿಗೆ ತನ್ನ ಬಲ ಪ್ರದರ್ಶನ ತೋರಿದ್ದಾಳೆ. ಬಳಿಕ ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಹಿಡಿದು ಕಟ್ಟಿ ಅವರ ಮನೆಗೆ ಬಿಟ್ಟು ಬಂದಿದ್ದಾರೆ. ಮನೆಯ ಸದಸ್ಯರಿಗೆ ಪೊಲೀಸರು ಎಚ್ಚರಿಕೆ ನೀಡಿ, ಕೂಡಲೇ ಆಕೆಗೆ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net