

ಸಾಗರ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ತಾಲೂಕಿನಾದ್ಯಂತ ಮನೆ ಮಾಡಿತ್ತು. ಇಲ್ಲಿನ ಸುಭಾಷ್‌ನಗರ ಚಿಲುಮೆಕಟ್ಟೆ ಭೂತೇಶ್ವರ ದೇವಸ್ಥಾನದ ಸಮೀಪ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ಶ್ರೀರಾಮನಿಗೆ ವಿಶೇಷ ಪೂಜೆ ನಡೆಸಿದರು. ಭಜನೆ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ವಿಎಚ್‌ಪಿ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣವಾಗಿದೆ. ದೇಶವಾಸಿಗಳ ಶತಮಾನದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ. ಮರ್ಯಾದಾ ಪುರೊಷೋತ್ತಮನ ದೇಗುಲ, ಮೂರ್ತಿ ಪ್ರತಿಷ್ಠಾಪನೆಗೊಳ್ಳುವ ಮೂಲಕ ಹಿಂದುಗಳ ಶತ ಶತಮಾನದ ಆಸೆ ಈಡೇರಿದೆ ಎಂದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ಪುರುಷೋತ್ತಮ್, ಕಿರಣ್ ಗೌಡ, ಮೈತ್ರಿ ಪಾಟೀಲ್, ಶೇಖರ್, ಚೇತನ್, ಬಿ.ಟಿ.ರವೀಂದ್ರ, ಅರುಣ ಕುಗ್ವೆ, ಸತೀಶ್ ಮೊಗವೀರ ಇತರರಿದ್ದರು.
ವಾಸವಿ ಯುವಜನ ಸಂಘದಿಂದ ನಗರೇಶ್ವರ ದೇವಸ್ಥಾನದಲ್ಲಿ ರಾಮತಾರಕ ಹವನ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಸಲಾಗಿತ್ತು. ಶ್ರೀ ವಹಾಗಣಪತಿ ದೇವಸ್ಥಾನ, ರಥಬೀದಿಯ ರಾಮಮಂದಿರ, ಮಾರಿಕಾಂಬ ದೇವಸ್ಥಾನ, ಅಣಲೆಕೊಪ್ಪದ ಶ್ರೀ ಪ್ರಸಾದ ಗಣಪತಿ ದೇವಸ್ಥಾನ, ಶಿವಪ್ಪನಾಯಕ ನಗರದ ದೈವಜ್ಞ ಸಮಾಜದ ರಾಮ ದೇವಸ್ಥಾನ, ಉಪ್ಪಾರ ಸಮಾಜದ ವೀರಾಂಜನೇಯ ದೇವಸ್ಥಾನ, ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ವೆಂಕಟರಮಣಸ್ವಾಮಿ ದೇವಸ್ಥಾನ, ಗುಡಿಗಾರ ಸಮಾಜದ ಶ್ರೀರಾಮ ದೇವಸ್ಥಾನ ಒಳಗೊಂಡಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಿ ಸಂಭ್ರಮಿಸಲಾಯಿತು. ನಗರದ ಎಲ್ಲ ವೃತ್ತಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ಶ್ರೀರಾಮನ ಬೃಹತ್ ಭಾವಚಿತ್ರ ಅಳವಡಿಸಿ ಪಾನಕ-ಕೋಸಂಬರಿ ಹಂಚಿದರು. ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿ ನೇರಪ್ರಸಾರದ ವ್ಯವಸ್ಥೆ ಮಾಡಿದ್ದರು. ಬಹುತೇಕೆ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಅಂಬೇಡ್ಕರ್ ವೃತ್ತದಲ್ಲಿ ಬಿಲ್ಲು ಬಾಣ ಹಿಡಿದ ಶ್ರೀ ರಾಮನ ಭಾವಚಿತ್ರ ಜನಮನ ಸೆಳೆಯಿತು.