ಬಸರಾಳಿನಲ್ಲಿ ಸಂಭ್ರಮದ ರಾಮೋತ್ಸವ: ದೇವಾಲಯದಲ್ಲಿ ವಿಶೇಷ ಪೂಜೆ

Ramotsava celebration at Basaralu village mandya
Published on

ಮಂಡ್ಯ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನ ಬಸರಾಳು ಗ್ರಾಮದಲ್ಲಿ ರಾಮೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಗ್ರಾಮದ ಪುರಾಣ ಪ್ರಸಿದ್ಧ ಕೋಟೆಯ ಬಾಗಿಲು ಏಳು ಎಡೆ ಸರ್ಪ ಸಮೇತ ಆಂಜನೇಯಸ್ವಾಮಿ ದೇವಾಲಯ, ಏಳುನೂರು ವರ್ಷದ ಇತಿಹಾಸ ಹೊಂದಿರುವ ನಾಗಲಿಂಗೇಶ್ವರಸ್ವಾಮಿ, ನಂದಿಬಸವೇಶ್ವರಸ್ವಾಮಿ ದೇವಾಲಯ ಹಾಗೂ ಕಾಲಭೈರವೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಗ್ರಾಮದ ಎಲ್ಲ ದೇವಾಲಯಗಳನ್ನು ಒಂದು ದಿನ ಮುಂಚಿತವಾಗಿ ಸ್ವಚ್ಛಗೊಳಿಸಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ಧಾರ್ಮಿಕ ಕೈಂಕರ್ಯ ನಡೆಯಿತು. ಅಂತೆಯೇ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು .

ಗ್ರಾಮದ ಬಸ್‌ನಿಲ್ದಾಣದ ಮುತ್ತೇಗೆರೆ ರಸ್ತೆ ವೃತ್ತದಲ್ಲಿ ಶ್ರೀರಾಮನ ಬೃಹತ್ ಕಟೌಟ್ ಅಳವಡಿಸಿ ಹೂವುಗಳಿಂದ ಸಿಂಗರಿಸಲಾಗಿತ್ತು. ಕೇಸರಿ ಧ್ವಜಗಳ ಗ್ರಾಮದ ತುಂಬೆಲ್ಲ ರಾರಾಜಿಸಿದವು. ರಾಮನ ಕಟೌಟ್‌ಗೆ ಮಂಗಳಾರತಿ ನೆರವೇರಿಸಿದ ಬಳಿಕ ಸಾವಿರಾರು ಭಕ್ತರಿಗೆ ಲಾಡುಗಳನ್ನು ಪ್ರಸಾದವಾಗಿ ವಿತರಿಸಲಾಯಿತು. ಕೋಟೆ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ಪುಳಿಯೋಗರೆ ಹಾಗೂ ಕೇಸರಿ ಬಾತ್ ನೀಡಲಾಯಿತು. ಇನ್ನೊಂದೆಡೆ ಬಸರಾಳು ಗ್ರಾಮದ ವಿಶ್ವಕರ್ಮ ಜನಾಂಗದ ವತಿಯಿಂದ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಸಿಹಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net