

ವಿಜಯವಾಣಿ ಸುದ್ದಿಜಾಲ ವಿಜಯಪುರ
ಹೋಬಳಿ ಹಾಗೂ ಪಟ್ಟಣದಾದ್ಯಂತ ಶ್ರೀರಾಮ, ಹನುಮಂತನ ದೇವಾಲಯ ಹಾಗೂ ಎಲ್ಲ ವೃತ್ತಗಳಲ್ಲಿ ಶ್ರೀರಾಮದೇವರ ಭಾವಚಿತ್ರಕ್ಕೆ ವಿಶೇಷ ಪುಷ್ಪಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಅಂಕತಟ್ಟಿ ನಂಜುಂಡಪ್ಪ ವೃತ್ತ, ಗಾಂಧಿಚೌಕದಲ್ಲಿನ ಶ್ರೀ ಕೋದಂಡ ರಾಮಸ್ವಾಮಿ, ಇತಿಹಾಸ ಪ್ರಸಿದ್ಧ ಆನೇಕಲ್ ಛತ್ರದ ಶ್ರೀ ಭಕ್ತಾಂಜನೇಯಸ್ವಾಮಿ, ಗುರಪ್ಪನ ಮಠದ ಮೂಡಲ ಆಂಜನೇಯಸ್ವಾಮಿ, ರಾಮಮಂದಿರ ಬೀದಿಯ ಕೋದಂಡರಾಮ, ಕೊಮ್ಮಸಂದ್ರ ಶ್ರೀ ಆಂಜನೇಯ, ದೇವನಹಳ್ಳಿ ಮುಖ್ಯರಸ್ತೆಯ ವಿಜಯ ವೀರಾಂಜನೇಯ ಸ್ವಾಮಿ, ನಾಗರಬಾವಿ ಆಂಜನೇಯಸ್ವಾಮಿ, ಧರ್ಮರಾಯಸ್ವಾಮಿ, ಶಿಡ್ಲಘಟ್ಟ ಕ್ರಾಸ್ ಸಮೀಪದ ಅಭಯ ಆಂಜನೇಯ ಸ್ವಾಮಿ, ಐಬಸಾಪುರದ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಬಸ್ ನಿಲ್ದಾಣದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಪಟ್ಟಣದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿದವು.
ಸಂತೆ ತೋಪಿನ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಹಾಗೂ ರಾಮಮಂದಿರ ಬೀದಿಯ ಕೋದಂಡರಾಮ ದೇವಾಲಯಗಳಲ್ಲಿ 1.8 ಲಕ್ಷ ಶ್ರೀರಾಮನಾಮ ಜಪಯಜ್ಞ ಏರ್ಪಡಿಸಲಾಗಿತ್ತು. ಗಾಂಧಿ ಚೌಕದಲ್ಲಿ ಎಲ್‌ಇಡಿ ಪರದೆಯಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ಏರ್ಪಡಿಸಿ, ಆಗಮಿಕ ಲೋಕನಾಥಾಚಾರ್ಯ ನೇತೃತ್ವದಲ್ಲಿ ಹೋಮ-ಹವನಾದಿ ಪೂರೈಸಲಾಯಿತು.
ಕೇಸರಿಮಯವಾದ ಪಟ್ಟಣ: ಪಟ್ಟಣದೆಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸಿದವು. ಎಲ್ಲ ವೃತ್ತಗಳಲ್ಲೂ ಜನತೆ ಸ್ವಯಂ ಪ್ರೇರಿತವಾಗಿ ಶ್ರೀರಾಮನ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದ್ದು ವಿಶೇಷವಾಗಿತು.