

ಹುಬ್ಬಳ್ಳಿ: ಹನುಮಂತ ದೇವನ ಕಾಲ, ವಿಕ್ರಮಾದಿತ್ಯ ಮತ್ತು ಪ್ರಸ್ತುತ ಪ್ರಧಾನಿ ಮೋದಿಜಿ ಅವರ ಕಾಲದಲ್ಲಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ಮೂರು ಬಾರಿ ಜಾಗತಿಕ ಮಟ್ಟದಲ್ಲಿ ನಡೆದಂತಾಗಿದೆ ಎಂದು ಕಾಮಧೇನು ಕ್ಷೇತ್ರ ವೇದಪೀಠದ ಗುರುಗಳಾದ ಡಾ. ಕಂಠಪಲ್ಲೀ ಸಮೀರಣಾಚಾರ್ಯ ಹೇಳಿದರು.
ಇಲ್ಲಿಯ ವಿಜಯನಗರದ ಮಾರುತಿ ದೇವಾಲಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ವಿಜಯನಗರ ಹೌಸಿಂಗ್ ಸೊಸೈಟಿ, ವೇದಪೀಠ, ವಿಜಯಾಂಜನೇಯ ವೇದ ಸಂಸತ ವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಅಯೋಧ್ಯಾ ಬಾಲಶ್ರೀರಾಮಚಂದ್ರ ಪ್ರಾಣಪ್ರತಿಷ್ಠಾ ಉತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಶ್ರೀರಾಮದೀಪಾವಳಿ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ದೇಶದೆಲ್ಲೆಡೆ ಸಂಭ್ರಮ ಮನೆಮಾಡಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನವಾಗುತ್ತಿರುವುದಕ್ಕೆ ಸಂತಸಪಡುತ್ತಿದ್ದಾರೆ. ಶ್ರೀರಾಮ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶದ ಜನರ ದಶಕಗಳ ಕನಸು ಇಂದು ನನಸಾಗಿದ್ದು, ಇದು ಐತಿಹಾಸಿಕ ದಿನ. ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದರು.
ಸಂಯೋಜಕರಾದ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಶ್ರೀರಾಮಭಕ್ತಿಯು ಎಲ್ಲರ ಶ್ರೇಯಸ್ಸಿಗೆ ತಾರಕ ಮಂತ್ರ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ವಿಜಯನಗರ ಹೌಸಿಂಗ್ ಸೊಸೈಟಿ ಚೇರ್ಮನ್ ವಿ.ಸಿ. ದಿನೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೇರಪ್ರಸಾರ ವೀಕ್ಷಣೆ: ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರವನ್ನು ಶಾಸಕರು, ಭಕ್ತರು ವೀಕ್ಷಿಸಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಗಣ್ಯರಾದ ಆನಂದ ಪಾಟೀಲ, ವಾಸುದೇವ ಗೋಡಖಿಂಡಿ, ವಿನೋದ ದೇಶಪಾಂಡೆ, ಎನ್.ಕೆ. ಜೋಶಿ, ಕಾಥೋಟೆ, ವಿಜಯೀಂದ್ರ ಬಾಗಲ್, ಶ್ರೀಮಾತಾಜಿ ಕಂಠಪಲ್ಲೀ, ದೀಪಾ ಚವ್ಹಾಣ, ಶಶಿಕಲಾ ಧಾರವಾಡಕರ್, ಸಂಧ್ಯಾ ದೀಕ್ಷಿತ್, ಸವಿತಾ ದೀಕ್ಷಿತ್, ಕಿರಣ ಗಡ, ಡಾ. ಸಂದೀಪ್ ಕುಲಕಣಿರ್, ಮೊದಲಾದವರು ಉಪಸ್ಥಿತರಿದ್ದರು.
ಅದ್ಭುತ ಮಾಹಿತಿ ಪುರವಣಿ: ಇದೇ ಕಾರ್ಯಕ್ರಮದಲ್ಲಿ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಹೊರತಂದಿರುವ ರಾಮೋತ್ಸವ ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಪುರವಣಿ ಅದ್ಭುತವಾಗಿ ಮೂಡಿಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪುರವಣಿಯು ಇಡೀ ರಾಮಾಯಣವನ್ನು ಕಟ್ಟಿಕೊಟ್ಟಿದೆ. ಇದರಿಂದ ರಾಮಾಯಣ ದರ್ಶನವಾಗುತ್ತದೆ ಎಂದರು.
ಡಾ. ಸಮೀರಣಾಚಾರ್ಯ ಕಂಠಪಲ್ಲೀ, ವಿಜಯವಾಣಿ ಆರಂಭದಿಂದಲೂ ವಿಶೇಷತೆಗಳನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ. ವಿಶೇಷ ಎಂದರೆ ವಿಜಯಾವಾಣಿ ಆರಂಭವಾಗಿದ್ದು ರಾಮನವಮಿ ದಿನದಂದು. ಇದೀಗ ಅಯೋಧ್ಯೆ ರಾಮೋತ್ಸವ ಸಂದರ್ಭದಲ್ಲಿ ಮಾಹಿತಿಯುಕ್ತ ಪುರವಣಿ ಹೊರತಂದಿರುವುದು ಶ್ಲಾನೀಯ. ಧರ್ಮ, ಸಂಸತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ವಿಜಯವಾಣಿ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು.
ವಿಜಯವಾಣಿ ಸ್ಥಾನಿಕ ಸಂಪಾದಕರಾದ ಪ್ರಕಾಶ ಶೇಟ್ ಉಪಸ್ಥಿತರಿದ್ದರು.