ತಾಪ ಕಳೆಯಲು ಬಂದ ಬಾಲರಾಮ: ಈಶಪ್ರಿಯ ಶ್ರೀ

UDP-22-1-Ramotsava
Published on

ಉಡುಪಿ: ಭಕ್ತರ ತಾಪಾದಿಗಳನ್ನು ನಾಶಮಾಡಲು ಆಯೋಧ್ಯೆಯಲ್ಲಿ ಮತ್ತೆ ರಾಮನ ಜನನವಾಗಿದೆ. ನಮನ್ನೆಲ್ಲ ಸಲಹಲು ಬಾಲರಾಮನಾಗಿ ಆಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಗೊಂಡಿದ್ದಾನೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯ ರಥಬೀದಿಯಲ್ಲಿರುವ ಅದಮಾರು ಮಠದಲ್ಲಿ ರಾಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ತ್ರೇತಾಯುಗದ ರಾಮ ಪ್ರಜ್ಞೆ ಇಂದಿಗೂ ಜಾಗೃತವಾಗಿದೆ. ಈ ಪ್ರಜ್ಞೆ ಮುಂದಿನ ಸಹಸ್ರಮಾನದವರೆಗೆ ಇರಲು ಒಂದು ಸ್ಮಾರಕ ಬೇಕಿತ್ತು. ಅಂತಹ ಸ್ಮಾರಕ ಆಯೋಧ್ಯೆಯಲ್ಲಿ ಲೋಕಾರ್ಪಣೆ ಆಗಿದೆ. ಇಂತಹ ಐತಿಹಾಸಿಕ ಕ್ಷಣದಲ್ಲಿ ನಾವೆಲ್ಲ ಇದ್ದೇವೆ ಎನ್ನುವುದೇ ಪುಣ್ಯ. ನಮ್ಮ ಜನ್ಮ ಸಾರ್ಥಕವಾಗಿದೆ. ಇಂತಹ ಸಂತಸದ ಕ್ಷಣ ನಿರಂತರವಾಗಿ ಮನ-&ಮನೆಗಳಲ್ಲಿ ನೆಲೆಸಲಿ ಎಂದರು.

ಸಿದ್ಧಿ ಪ್ರಾಪ್ತಿ:
ಅದಮಾರು ಮಠದ ಹಿರಿಯ ಸ್ವಾಮೀಜಿ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಲಕ್ಷ ಅಥವಾ ಕೋಟಿ ಬಾರಿ ರಾಮನನ್ನು ಜಪಿಸಿದರೆ ಅವರು ಸಿದ್ಧರಾಮರಾಗುತ್ತಾರೆ. ಕೃಷ್ಣನನ್ನು ಸ್ಮರಿಸಿದರೆ ಸಿದ್ಧಕೃಷ್ಣರಾಗುತ್ತಾರೆ. ಅದೇ ರೀತಿ 500 ವರ್ಷದಿಂದ ಅಯೋಧ್ಯೆಯಲ್ಲಿ ರಾಮಮಂದಿರ ಆಗಲೇ ಬೇಕು ಎಂಬ ಹಠದಿಂದ ಜಪ ನಡೆಸಿದ್ದರಿಂದ ಮಂದಿರ ಸಿದ್ಧವಾಗಿ ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆ ಆಗಿದೆ. ಇದೇ ರೀತಿ ಮುಂದಿನ 5 ವರ್ಷದಲ್ಲಿ ಮಥುರಾದಲ್ಲಿಯೂ ಕೃಷ್ಣನಿಗೆ ಮುಂದಿರ ಆಗುವುದರಲ್ಲಿ ಸಂಶಯವಿಲ್ಲ. ದುಷ್ಟರು ರಾಮಾಯಣ ಕಾಲದಲ್ಲೂ ಇದ್ದರು. ಅವರೆಲ್ಲ ಏನಾದರು ಎನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆ. ಅದೇ ರೀತಿ ಈಗಿರುವ ದುಷ್ಟರೂ ಅಂತ್ಯ ಕಾಣುತ್ತಾರೆ ಎಂದರು.
ಕೃಷ್ಣ ಸೇವಾ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಠದ ವ್ಯವಸ್ಥಾಪಕ ಗೋವಿಂದ ರಾಜ್​ ನಿರೂಪಿಸಿದರು. ಹೆಸರುಬೇಳೆಯಿಂದ ತಯಾರಿಸಿದ್ದ ಉಸುಳಿ ಹಾಗೂ ಕಾಳುಮೆಣಸು, ಶುಂಠಿ, ಜೇನುತುಪ್ಪ ಲಿಂಬು ಮಿಶ್ರಣದಿಂದ ತಯಾರಿಸಿದ್ದ ಬಿಸಿ ಪಾನಕವನ್ನು ಭಕ್ತರಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net