ರಾಮನಗರ ಮಹಿಳಾ ತಂಡ ಕಬಡ್ಡಿ ಚಾಂಪಿಯನ್: ಕೋಲಾರ ಸರ್ಕಾರಿ ಕಾನೂನು ಕಾಲೇಜು ರನ್ನರ್‌ಅಪ್

Ramnagar Women's Team Kabaddi Champions Mandya
Published on

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ನಡೆದ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳಾ ವಿಭಾಗದ ಕಬಡ್ಡಿ ಟೂರ್ನಿಯಲ್ಲಿ ರಾಮನಗರ ಸರ್ಕಾರಿ ಕಾನೂನು ಕಾಲೇಜು ಚಾಂಪಿಯನ್ ಪಟ್ಟ ಅಲಂಕರಿಸಿತು.

ಪಿಇಎಸ್ ಕಾನೂನು ಕಾಲೇಜು, ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಮನಗರ ತಂಡ ಕೋಲಾರ ಸರ್ಕಾರಿ ಕಾನೂನು ಕಾಲೇಜು ತಂಡವನ್ನು 14-03 ಅಂಕಗಳ ಅಂತರದಲ್ಲಿ ಸೋಲಿಸಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ರಾಮನಗರ ತಂಡ ಮಂಗಳೂರು ತಂಡವನ್ನು, ಕೋಲಾರ ತಂಡ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದವು.

ಮಂಗಳೂರು ಎಸ್‌ಡಿಎಂ ಕಾಲೇಜಿನ ಲಿಮಿತರಾವ್ ಉತ್ತಮ ದಾಳಿಗಾರ್ತಿ, ಕೋಲಾರ ಸರ್ಕಾರಿ ಕಾನೂನು ಕಾಲೇಜಿನ ಸುಜಾತಾ ಉತ್ತಮ ಹಿಡಿತಗಾರ್ತಿ ಹಾಗೂ ರಾಮನಗರ ಸರ್ಕಾರಿ ಕಾನೂನು ಕಾಲೇಜಿನ ಸಂಗೀತಾ ಟೂರ್ನಿಯ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.

ಶನಿವಾರ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಜನತಾ ಶಿಕ್ಷಣ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ.ಶ್ರೀಧರ್ ಮಾತನಾಡಿ, ವಿದ್ಯಾರ್ಜನೆಗೆ ಕ್ರೀಡೆ ಅತ್ಯಂತ ಸಹಕಾರಿಯಾಗಿದೆ. ಪ್ರತಿ ವಿದ್ಯಾರ್ಥಿಯು ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಸಹ ಮುಖ್ಯ. ವಿದ್ಯಾಭ್ಯಾಸಕ್ಕೆ ಪೂರಕವಾದ ಮನಃಶಕ್ತಿಯನ್ನು ದೃಢವಾಗಿ ನಿಲ್ಲುವಂತೆ ಮಾಡುತ್ತದೆ. ಆದ್ದರಿಂದ ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡೆಗಳಲ್ಲಿ ಸಾಕಷ್ಟು ವಿಧಗಳಿವೆ. ಅದರಲ್ಲೂ ಈಜು ಸಹ ಪ್ರಮುಖವಾಗಿದೆ. ಇದು ವಿದ್ಯಾರ್ಥಿಯ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಏಕಾಗ್ರತೆಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳಲ್ಲೂ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಉತ್ಸಾಹದೊಂದಿಗೆ ದೈಹಿಕ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾನೂನು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಶಶಿಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಯೋಗೇಶ್, ಡಾ.ಬಿ.ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net