ರಾಮನಗರ -ಗುಂಡಿಕೆರೆ ರಸ್ತೆ ಸ್ಥಿತಿ ಅಯೋಮಯ

 ರಾಮನಗರದಿಂದ ಗುಂಡಿಕೆರೆ ಗೆ ಸಂಪರ್ಕ ಕಲ್ಪಿಸುವ  ರಸ್ತೆಯ ಸ್ಥಿತಿ.
ರಾಮನಗರದಿಂದ ಗುಂಡಿಕೆರೆ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ.
Published on

ವಿರಾಜಪೇಟೆ: ಸಮರ್ಪಕವಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವ ರಸ್ತೆ.... ಸುಸಜ್ಜಿತ ಚರಂಡಿ ವ್ಯವಸ್ಥೆ ಇದ್ದರೂ ರಸ್ತೆ ಮೇಲೆ ಹರಿಯುವ ನೀರು.... ಮೋರಿ ನಿರ್ಮಾಣವಾಗಿದ್ದರೂ ರಸ್ತೆಯಲ್ಲೇ ಸಂಗ್ರಹವಾಗುವ ನೀರು... ಇದು ತಾಲೂಕಿನ ಬೇಟೋಳಿ ಗ್ರಾಮದ ರಾಮನಗರ -ಗುಂಡಿಕೆರೆ ಸಂಪರ್ಕ ಕಲ್ಪಿಸುವ ರಸ್ತೆಯ ಅವಸ್ಥೆ.

ರಾಮನಗರದಿಂದ ಗುಂಡಿಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಅಸಾಧ್ಯವಾಗಿದೆ. ರಸ್ತೆ ದುರಸ್ತಿ ಸಂಬಂಧ ಜನರು ಈ ಬಗ್ಗೆ ನಿರಂತರವಾಗಿ ಮನವಿ ಸಲ್ಲಿಸಿದ ಪರಿಣಾಮ ಕೆಲವು ವರ್ಷಗಳ ಹಿಂದೆ ರಸ್ತೆಯನ್ನು ಡಾಂಬರೀಕರಣ ಮಾಡಲಾಯಿತು. ಇದರೊಂದಿಗೆ ನಾಲ್ಕು ಕಡೆ ಮೋರಿ ನಿರ್ಮಾಣ ಮಾಡಿ ಮಳೆ ನೀರು ಸಮರ್ಪಕವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಯಿತು.

ಇದರೊಂದಿಗೆ ಮತ್ತೊಂದು ಕಡೆ ಮಳೆ ನೀರು ಸರಾಗವಾಗಿ ಹರಿದು ಮೋರಿ ಸೇರಬೇಕೆಂದು ರಸ್ತೆಯ ಬದಿಯ ಸ್ವಲ್ಪ ಭಾಗವನ್ನು ಕಾಂಕ್ರೀಟ್‌ನಿಂದ ಹಾಗೂ ಕೆಲವು ಭಾಗದ ಮಣ್ಣನ್ನು ಅಗೆದು ಚರಂಡಿ ನಿರ್ಮಾಣ ಮಾಡಲಾಗಿದೆ. ಕೆಲವು ವರ್ಷಗಳ ಕಾಲ ಈ ಚರಂಡಿಯಲ್ಲಿನ ಮಣ್ಣನ್ನು ತೆಗೆದು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಚರಂಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಮಳೆ ನೀರು ರಸ್ತೆ ಮೇಲೆ ನಿರಂತರವಾಗಿ ಹರಿಯುವಂತಾಗಿದೆ. ಪರಿಣಾಮ ರಸ್ತೆಯ ಎರಡೂ ಅಂಚಿನ ತುದಿಗಳು ದಿನದಿಂದ ದಿನಕ್ಕೆ ಕಿತ್ತು ಬರುತ್ತಿದೆ. ಇದರಿಂದ ರಸ್ತೆಯು ಹಾಳಾಗುವುದರೊಂದಿಗೆ ಡಾಂಬರೀಕರಿಸಿದ ರಸ್ತೆ ಕಿರಿದಾಗುತ್ತಿದೆ.

ಕಿತ್ತು ಬರುತ್ತಿದೆ ಮಣ್ಣು, ಕಲ್ಲು, ಡಾಂಬರು: ಚರಂಡಿಯಲ್ಲಿ ಮಣ್ಣು ತುಂಬಿ ಹೋಗಿದ್ದು, ಇದರಿಂದಾಗಿ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಇಳಿಜಾರಿನ ರಸ್ತೆಯಲ್ಲಿ ನೀರು ವೇಗವಾಗಿ ಹರಿಯುವುದರಿಂದ ರಸ್ತೆ ಅಂಚಿನಲ್ಲಿರುವ ಮಣ್ಣು, ಕಲ್ಲು, ಡಾಂಬರು ಕಿತ್ತು ಹೋಗುತ್ತಿದೆ. ಚರಂಡಿ ನೀರು ವೇಗವಾಗಿ ಕೆಳಭಾಗವನ್ನು ತಲುಪುತ್ತಿರುವುದರಿಂದ ಇಳಿಜಾರಿನ ನಂತರ ಸಿಗುವ ಸಮತಟ್ಟು ರಸ್ತೆಯಲ್ಲಿ ದೊಡ್ಡ ದೊಡ್ಡ ಹಳ್ಳಗಳು ನಿರ್ಮಾಣವಾಗಿ ವಾಗಿದೆ.

ಮೇಲ್ಭಾಗದಿಂದ ರಸ್ತೆ ಮೇಲೆ ಹರಿದು ಬರುವ ಮಳೆ ನೀರು ಮಣ್ಣು ಹಾಗೂ ಕಲ್ಲುಗಳನ್ನು ಕೊಚ್ಚಿ ತಂದು ಸಮತಟ್ಟಾದ ರಸ್ತೆಯ ಮಧ್ಯದಲ್ಲಿ ಶೇಖರಣೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಮಳೆ ಬಂದ ಸಂದರ್ಭದಲ್ಲಿ ಕೊಚ್ಚಿ ಬಂದ ಮಣ್ಣು ಕೆಸರಾಗಿ ಪರಿವರ್ತನೆಯಾಗಿ ವಾಹನ ಸವಾರರು ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಡಕು ಉಂಟು ಮಾಡುತ್ತಿದೆ. ರಸ್ತೆಯಲ್ಲಿ ನಿರ್ಮಾಣವಾದ ಹಳ್ಳಗಳು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಕಲ್ಲುಗಳು ಹಳ್ಳದಿಂದ ಹೊರಕ್ಕೆ ಬಂದು ರಸ್ತೆಯ ಮೇಲ್ಭಾಗದಲ್ಲಿ ಶೇಖರಣೆಯಾಗುತ್ತಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.

ಈ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಕೆಲವು ಶಾಲಾ ವಾಹನಗಳು ಸಂಚರಿಸುತ್ತವೆ. ಈ ರಸ್ತೆಯ ಕೆಲವು ಕಡೆಗಳಲ್ಲಿ ಅಪಾಯಕಾರಿ ತಿರುವುಗಳಿದ್ದು, ಇಂತಹ ತಿರುವಿನಲ್ಲಿ ಶಾಲಾ ವಾಹನ ವೇಗವಾಗಿ ಸಂಚರಿಸಿದ ಹಲವು ಹಲವು ಉದಾಹರಣೆ ಉಂಟು. ಅಲ್ಲದೆ ಇಂತಹ ಅಪಾಯಕಾರಿ ಸ್ಥಳದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ನಡುವೆ ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮ ಪಂಚಾಯಿತಿ ವೇಗದ ಮಿತಿ ತಿಳಿಸುವ ಸೂಚನಾಫಲಕ ಅಳವಡಿಸುವುದರೊಂದಿಗೆ ರಸ್ತೆಯ ಬದಿಯಲ್ಲಿನ ಕಾಡನ್ನು ಕಡಿದು ಉತ್ತಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಬೇಕಿದೆ.

ಸದ್ಯದ ಮಟ್ಟಿಗೆ ರಸ್ತೆಯನ್ನು ಹೊಸದಾಗಿ ಡಾಂಬರೀಕರಣ ಸಾಧ್ಯವಾಗದಿದ್ದರೂ ರಸ್ತೆಯಲ್ಲಿ ನಿರ್ಮಾಣವಾಗಿರುವ ಹಳ್ಳಗಳನ್ನು ಮುಚ್ಚಿ ಉತ್ತಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕಿದೆ. ಚರಂಡಿ ಬಳಿ ಬೆಳೆದಿರುವ ಗಿಡಗಂಟಿಗಳನ್ನು ಕಡಿದು ಚರಂಡಿಯೊಳಗೆ ತುಂಬಿರುವ ಮಣ್ಣನ್ನು ತೆರವುಗೊಳಿಸುವ ಮೂಲಕ ಮಳೆ ನೀರು ಸಮರ್ಪಕವಾಗಿ ಹರಿದು ಹೋಗುವ ಹಾಗೆ ಪಂಚಾಯಿತಿ ಕ್ರಮ ಕೈಗೊಳ್ಳಲಿ ಎಂಬುದು ಇಲ್ಲಿನ ಸಾರ್ವಜನಿಕರ ಮಾತು.

ರಾಮನಗರ-ಗುಂಡಿಗೆರೆ ಮಾರ್ಗ ಪಿಡಬ್ಲುೃಡಿ ವ್ಯಾಪ್ತಿಗೆ ಬರಲಿದೆ. ಕಳೆದ ಬಾರಿ ಪಂಚಾಯಿತಿ ವತಿಯಿಂದ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿತ್ತು. ಕಾಡನ್ನು ಕಡಿದು ರಸ್ತೆ ಸಂಪರ್ಕಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿತ್ತು. ಆದಷ್ಟು ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಪಂಚಾಯಿತಿ ವತಿಯಿಂದ ಪ್ರಯತ್ನ ಮಾಡಲಾಗುವುದು.

ಮಣಿ ಪಿಡಿಒ, ಬೇಟೋಳಿ ಗ್ರಾಮ ಪಂಚಾಯಿತಿ

ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಾಗೂ ಚರಂಡಿ ನಿರ್ವಹಣೆಗೆ ಆ್ಯಕ್ಷನ್ ಪ್ಲಾೃನ್ ನಿರ್ಮಿಸಲಾಗಿದೆ. ರಸ್ತೆಯಲ್ಲಿ ನಿರ್ಮಾಣವಾಗಿರುವ ಹಳ್ಳಗಳನ್ನು ಪಿಡಬ್ಲುೃಡಿ ಇಲಾಖೆ ವತಿಯಿಂದ ಶೀಘ್ರ ಮುಚ್ಚುವ ಕೆಲಸವಾಗಲಿದೆ. ಇಷ್ಟು ದಿನಗಳವರೆಗೆ ಮಳೆ ಇದ್ದ ಕಾರಣ ಕೆಲಸ ವಿಳಂಬವಾಗಿತ್ತು. ಶೀಘ್ರ ರಸ್ತೆ ಸಂಚಾರ ಯೋಗ್ಯವಾಗಲಿದೆ.

ಎಂ.ಎಂ.ರಜಾಕ್ ಸದಸ್ಯ, ಬೇಟೋಳಿ ಗ್ರಾಮ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net