

ಮೈಸೂರು: ಸನಾತನಕ್ಕೆ ಮೌಲ್ಯ ಇರುವಂತೆ ಅಪಮೌಲ್ಯಗಳಿವೆ. (ಉದಾಃ: ಚಾತುರ್ವರ್ಣ, ಜಾತಿಭೇದ, ಮೇಲುಕೀಳು, ಅಸಹನೆ.) ಇವತ್ತು ಮೌಲ್ಯ ಮತ್ತು ಅಪಮೌಲ್ಯದ ನಡುವೆ ಘರ್ಷಣೆ ನಡೆಯುತ್ತಿದೆ. ಅಪೂರ್ಣ ರಾಮ ಮಂದಿರ ಉದ್ಘಾಟನೆ ದೇಶದ ಮೆದುಳು ತಿನ್ನುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ ಸಹಯೋಗದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮಟ 2ನೇ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ದೇಶದ ಹಳ್ಳಿ ಹಳ್ಳಿಯಲ್ಲಿರುವ ರಾಮ ಮಂದಿರಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರಗಳು. ಈಗ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ರಾಜಕಾರಣದ ಜೂಜಾಟದ ಕೇಂದ್ರ ಎಂದರು.
ಸನಾತನ ಹಿಂದಿನಿಂದ ಬಂದದ್ದು. ಅಂದ್ರೆ ಅನಾದಿ. ಅತಿ ಆಸೆ ಗತಿಕೇಡು ಎಂಬ ಮಾತು ಸನಾತನವಾದದ್ದು. ಈ ಮಾತು ಬುದ್ಧನಿಂದ ಬಂದಿದೆ. ಗರ್ವಭಂಗ ಇನ್ನೊಂದು ಮಾತು. ಇದು ಆಂಜನೇಯನನ್ನು ಅಲುಗಾಡಿಸಲಾಗದ ಭೀಮ, ಮಗನಿಂದಲೇ ಸೋತ ಅರ್ಜುನ ಇತ್ಯಾದಿ. ಹಾಗೇ ಹಿಂದೂ ಅನ್ನುವುದು ಸಹಜ. ಹಿಂದೂತ್ವ ಎನ್ನುವುದು ನಾನತ್ವ ಎಂದು ಹೇಳಿದರು.
ರಾಮ ನ್ಯಾಯದ ಗಂಟೆ ಕಟ್ಟಿಸಿದ್ದ. ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಗಂಟೆ ಎಳೆದು ನ್ಯಾಯ ಕೇಳಬಹುದಿತ್ತು. ಈಗ ಉದ್ಘಾಟನೆಯಾಗಲಿರುವ ದೇಗುಲದ 4 ದಿಕ್ಕಿನಲ್ಲೂ 4 ಗಂಟೆಗಳನ್ನು ಕಟ್ಟಿಸಬೇಕು. ಮಾತು ಕೊಟ್ಟವರು ಮಾತು ನಡೆಸೋದು ಮೌಲ್ಯ. ಮಾತನ್ನು ಕಾಲು ಕಸ ಮಾಡಬಾರದು ಎಂದು ತಿಳಿಸಿದರು.