ರಾಮಕುಮಾರ್ ರಾಮನಾಥನ್ ಚಾಂಪಿಯನ್

22 vikram 3
Published on

ವಿಕ್ರಮ ನಾಡಿಗೇರ ಧಾರವಾಡ
ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಪೆವಲಿಯನ್ ಕೋರ್ಟ್‌ನಲ್ಲಿ ಇಬ್ಬರು ಭಾರತೀಯರ ಮಧ್ಯೆ ಭಾನುವಾರ ಜರುಗಿದ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕಿತ, ಚನ್ನೈನ ರಾಮಕುಮಾರ್ ರಾಮನಾಥನ್ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಆರಂಭದಿಂದಲೂ ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಹರಿಯಾಣದ ದಿಗ್ವಿಜಯ ಪ್ರತಾಪಸಿಂಗ್ ಅವರನ್ನು 7-6 (5), 7-6(6) ಸೆಟ್‌ಗಳಿಂದ ಪರಾಭವಗೊಳಿಸಿದರು. ಟ್ರೋಫಿ ಜತೆಗೆ 3600 ಅಮೆರಿಕನ್ ಡಾಲರ್ ನಗದು ಬಹುಮಾನ ಪಡೆದುಕೊಂಡರು. ಇನ್ನು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ದಿಗ್ವಿಜಯ ಪ್ರತಾಪಸಿಂಗ್ ಟ್ರೋಫಿ ಜತೆಗೆ 2120 ಡಾಲರ್ ನಗದು ಬಹುಮಾನ ಪಡೆದರು.
ಭಾರತದ ಡೇವಿಸ್ ಕಪ್ ತಂಡದಲ್ಲಿ ಜೊತೆಗಾರರಾಗಿರುವ ರಾಮನಾಥನ್ ಮತ್ತು ದಿಗ್ವಿಜಯ ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಪ್ರಥಮ ಬಾರಿ ಮುಖಾಮುಖಿಯಾಗಿದ್ದು, ತಮ್ಮ ಶ್ರೇಯಾಂಕಕ್ಕೆ ತಕ್ಕಂತೆ ಶ್ರೇಷ್ಠ ಆಟಗಾರಿಕೆ ಪ್ರದರ್ಶಿಸಿದರು. ಇಡೀ ಪಂದ್ಯದಲ್ಲಿ ಇಬ್ಬರೂ ಎದುರಾಳಿಯ ಸರ್ವಿಸ್ ಮುರಿಯಲಾಗದೇ ತಮ್ಮ ತಮ್ಮ ಸರ್ವಿಸ್‌ಗಳಲ್ಲಿ ಗೇಮ್ ಗೆಲ್ಲುತ್ತಾ ಎರಡೂ ಸೆಟ್‌ಗಳನ್ನು ಟೈ ಬ್ರೇಕರ್ ಹಂತಕ್ಕೆ ಒಯ್ದರು. ಮೊದಲ ಸೆಟ್‌ನ ಟೈ ಬ್ರೇಕರ್‌ನಲ್ಲಿ 5-0 ಮುನ್ನಡೆ ಗಳಿಸಿದ ರಾಮನಾಥನ್, ಮುಂದೆ 2 ಪಾಯಿಂಟ್ ತೆಗೆದುಕೊಳ್ಳುವ ಮೊದಲು ದಿಗ್ವಿಜಯ 5 ಪಾಯಿಂಟ್‌ಗಳನ್ನು ಗೆದ್ದು ಆತಂಕ ಮೂಡಿಸಿದ್ದರು. 2ನೇ ಸೆಟ್‌ನಲ್ಲಿ ಸಹ ಮೊದಲನೇ ಸೆಟ್‌ನ ಆಟದ ಪುನರಾವರ್ತನೆಯನ್ನು ಪ್ರೇಕ್ಷಕರು ವೀಕ್ಷಿಸುವಂತಾಯಿತು. ಟೈ ಬ್ರೇಕರ್‌ನಲ್ಲಿ ತುರುಸಿನ ಹೋರಾಟ ನಡೆದ 6-6ರಲ್ಲಿ ಸಮಸ್ಥಿತಿ ಇದ್ದಾಗ ದಿಗ್ವಿಜಯ ಮಾಡಿದ ತಪ್ಪು ರಾಮನಾಥನ್‌ಗೆ ಮ್ಯಾಚ್ ಪಾಯಿಂಟ್ ಒದಗಿಸಿತು. ತಮ್ಮ ಸರ್ವಿಸ್‌ನಲ್ಲಿ ಭರ್ಜರಿ ಏಸ್ ಸಿಡಿಸುವ ಮೂಲಕ ಕೊನೇ ಪಾಯಿಂಟ್ ಗೆದ್ದ ರಾಮನಾಥನ್ ಜಯಗಳಿಸಿದರು. ರಾಮಕುಮಾರ 20 ಎಟಿಪಿ (ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೇಶನಲ್ಸ್) ಪಾಯಿಂಟ್‌ಗಳನ್ನು ಪಡೆದರೆ, ದಿಗ್ವಜಯ 12 ಎಟಿಪಿ ಪಾಯಿಂಟ್‌ಗಳನ್ನು ಸಂಪಾದಿಸಿದರು.
ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಕಪಿಲ ಮೋಹನ ವಿಜೇತರಿಗೆ ಟ್ರೋಫಿ ಮತ್ತು ಚೆಕ್ ವಿತರಿಸಿದರು. ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರರಾವ್, ಡಿಡಿಎಲ್‌ಟಿ ಅಧ್ಯಕ್ಷ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್. ಪಾಟೀಲ, ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಡಿಡಿಎಲ್‌ಟಿಎ ಉಪಾಧ್ಯಕ್ಷ ನಾಗರಾಜ ಅಂಬಲಿ, ಕಾರ್ಯದರ್ಶಿ ಸಂದೀಪ ಬಣವಿ, ಕೆ.ಬಿ. ಪೂಜಾರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಇಲಿಯಾಸ್ ನಾಯಿಕವಾಡಿ ಮತ್ತು ಆತ್ಮಾನಂದ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net