

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮುಸ್ಲಿಂ ಸಮುದಾಯಕ್ಕಾಗಿ ಶೀಘ್ರದಲ್ಲೇ ಶಾದಿ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದೇವನಹಳ್ಳಿಯ ಈದ್ಗಾ ಮೈದಾನಕ್ಕೆ ಭೇಟಿ ಬೇಟಿ ನೀಡಿದ ಸಚಿವರು ಮುಸ್ಲಿಂ ಸಮುದಾಯದವರೊಂದಿಗೆ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಶಾಸಕನಾಗಿ ಎರಡು ವರ್ಷ ಕಳೆದಿದ್ದು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಲಾಗುತ್ತಿದೆ, ಮುಸ್ಲಿಂ ಸಮುದಾಯದವರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಕಾಲ ಕಾಲಕ್ಕೆ ಮಳೆ, ಸಮೃದ್ಧ ಬೆಳೆ ಕರುಣಿಸುವಂತಾಗಲಿ ಎಂದು ರಂಜಾನ್ ಹಬ್ಬದ ವೇಳೆ ಪ್ರಾರ್ಥಿಸುತ್ತೇನೆ ಎಂದರು. ಮುಸ್ಲಿಂ ಸಮುದಾಯದ ವಿಕಾಸಕ್ಕಾಗಿ ಸದಾ ಸಿದ್ದನಿದ್ದು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು. ಎಲ್ಲ ಸಮುದಾಯದವರಿಗೂ ಹಬ್ಬಗಳು ಪರಸ್ಪರ ಬಾಂಧವ್ಯ ಬೆಸೆಯುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಎಲ್ಲರೂ ಒಂದಾಗಿ ಹಬ್ಬದ ಸವಿಯನ್ನು ಹಂಚೋಣ ಎಂದು ಕರೆ ನೀಡಿದರು.