ಸಂಭ್ರಮದ ಶ್ರೀ ರಾಮೇಶ್ವರ ಬ್ರಹ್ಮರಥೋತ್ಸವ

nmt
Published on

ನ್ಯಾಮತಿ: ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ಇತಿಹಾಸ ಪ್ರಸಿದ್ಧ ತಾಲೂಕಿನ ಕುರುವ, ಗೋವಿನಕೋವಿ, ರಾಂಪುರ ಗ್ರಾಮಗಳ ಮಧ್ಯದ ಗೆಡ್ಡೆ ಶ್ರೀ ರಾಮೇಶ್ವರಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪದ್ಧತಿಯಂತೆ ಯುಗಾದಿ ಹಬ್ಬದಂದು ನಡೆಯುವ ರಾಮೇಶ್ವರ ಬ್ರಹ್ಮರಥೋತ್ಸವಕ್ಕೆ ಮಂಗಳವಾರ ಬೆಳಗ್ಗೆಯಿಂದಲೇ ಪುಣ್ಯಾಹ, ಪಂಚಾಮೃತ ಸಹಿತ ರುದ್ರಾಭಿಷೇಕ, ಕಂಕಣಧಾರಣೆ, ಉಚ್ಚಾಯ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.

ಕುರುವ, ರಾಂಪುರ, ಗೋವಿನಕೋವಿ, ಬಸವನಹಳ್ಳಿ, ಮರಿಗೊಂಡನಹಳ್ಳಿ ಭಕ್ತರು ಪಾದಯಾತ್ರೆ ಮೂಲಕ ಎಡೆ ತಂದು ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ತುಂಗಭದ್ರಾ ನದಿಗೆ ಗಂಗಾಪೂಜೆಯೊಂದಿಗೆ ಬ್ರಹ್ಮರಥೋತ್ಸವ ನಡೆಯಿತು.

ಬಲಿ ಅನ್ನ ಹಾಕಿ ಗೆಡ್ಡೆ ಶ್ರೀ ರಾಮೇಶ್ವರ ಸ್ವಾಮಿ ಉತ್ಸವ ಮೂರ್ತಿ ರಥಾರೋಹಣವಾಗುತ್ತಿದ್ದಂತೆ ಭಕ್ತರು ಹಣ್ಣು, ಕಾಯಿ ಅರ್ಪಿಸಿ ತೇರು ಎಳೆದರು.

ತಾಲೂಕಿನಲ್ಲಿ ಹೊಸ ಸಂವತ್ಸರದ ಮೊದಲ ರಥೋತ್ಸವವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ರಾಂಪುರ, ಬುಳ್ಳಾಪುರ, ಹೊಟ್ಯಾಪುರ, ಗೋವಿನಕೋವಿ, ಕುರುವ, ಅರಗಬಟ್ಟೆ ಸೇರಿ ವಿವಿಧ ಜಿಲ್ಲೆಯ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net