

ಹುಬ್ಬಳ್ಳಿ : ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಅವರ ಜನ್ಮದಿನದ ನಿಮಿತ್ತ ಡಾ. ರಮೇಶ ಮಹಾದೇವಪ್ಪನವರ ಗೆಳೆಯರ ಬಳಗದ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜೂ. 4ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ‘ರಮೇಶೋತ್ಸವ’ ಸರ್ವಧರ್ಮ ಸಮನ್ವಯ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ ಅಶೋಕ ವಾಲ್ಮೀಕಿ, ಡಿಎಲ್ಆರ್ಎಂ ಜೈ ಹನುಮಾನ್ ಫೌಂಡೇಶನ್ ಉದ್ಘಾಟನೆ ಹಾಗೂ ಇನ್ನಿತರ ಸಮಾಜಮುಖಿ ಸೇವಾ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಶಾಂತಿನಗರ ಪ್ರಾರ್ಥನಾ ಮಂದಿರದ ರೆ. ಫಾದರ್ ಡಾ. ಅಲ್ವಿನ್ ಸುಧೀರ, ಅಣ್ಣಿಗೇರಿಯ ಅಲ್ ಹಾಜ್ ಖಾದರಿಸಾಬ ಸನ್ನೂ ಭಾಯ ಅವರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಫೌಂಡೇಷನ್ ಉದ್ಘಾಟನೆ ಹಾಗೂ ಲಾಂಛನ ಅನಾವರಣ ನೆರವೇರಿಸುವರು. ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ, ಮಹಾಪೌರ ರಾಮಪ್ಪ ಬಡಿಗೇರ, ಉಪ ಮಹಾಪೌರ ದುರ್ಗಮ್ಮ ಬಿಜವಾಡ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಹಾಗೂ ಇನ್ನಿತರರು ಪಾಲ್ಗೊಳ್ಳುವರು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಬಡವರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕೃತಕ ಕೈ-ಕಾಲು ಜೋಡಣೆ, ಸೈನಿಕರಿಗೆ, ಅಂಗವಿಕಲರಿಗೆ, ಆರಕ್ಷಕರಿಗೆ, ಪತ್ರಕರ್ತರಿಗೆ, ಪೌರ ಕಾರ್ವಿುಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಸಿ ವಿತರಣೆ, ಕೋರಿಯರ್ ವಿತರಕರಿಗೆ ರೇನ್ಕೋಟ್ ಹಾಗೂ ಬಡ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.
ಹುಬ್ಬಳ್ಳಿ-ಧಾರವಾಡದ 50ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಕಾರ್ಯಕ್ರಮದೊಂದಿಗೆ ಕೈಜೋಡಿಸಿವೆ. ಸುಮಾರು 800 ಜನರು ಭಾಗವಹಿಸುವ ನಿರೀಕ್ಷೆ ಇದೆ. ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಆಟೋರಿಕ್ಷಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಆಯೋಜಕ ಚಂದ್ರಶೇಖರ ಮಾಡಲಗೇರಿ, ರಾಜು ಕಾಳೆ, ರವಿಚಂದ್ರ ದೊಡ್ಡಿಹಾಳ, ಡಿ.ಆರ್. ಅಸುದುಲ್ಲಾ ಕಾರಿಗಾರ್, ಕಾಸಿಂಸಾಬ ಕೂಡಲಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.