

ಬೆಳಗಾವಿ: ಮಾತು ಕೊಟ್ಟಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಅವರನ್ನೇ ನೇಮಕ ಮಾಡಬೇಕೆಂಬ ಅಭಿಲಾಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡುವ ಕುರಿತಂತೆ ಮೊದಲೇ ಮಾತು ಕೊಡಲಾಗಿದೆ. ಅದರಂತೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಒತ್ತಾಯ ನಾನೂ ಮಾಡಿದ್ದೇನೆ. ಈ ಕುರಿತು ಬುಧವಾರ ಮಾತುಕತೆ ಆಗಿದೆ. ಆಗ ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದರು.
ಶಿರಾ, ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಕಮೆಂಟ್ ಮಾಡುವುದಿಲ್ಲ. ನಮ್ಮ ಪಕ್ಷ ದೇಶದುದ್ದಕ್ಕೂ ಯಶಸ್ವಿಯಾಗಿ ಬೆಳೆಯುತ್ತಿದೆ. ಇವಿಎಂ ವಿಫಲ ಇದ್ದಿದ್ದರೆ ಕಳೆದ ಚುನಾವಣೆಯಲ್ಲಿ
ನಾನು ಕಾಂಗ್ರೆಸ್‌ನಲ್ಲಿದ್ದಾಗ ಗೋಕಾಕ ಕ್ಷೇತ್ರದಿಂದ ಸೋತು, ಈಗ ಮಾಜಿ ಶಾಸಕ ಆಗುತ್ತಿದ್ದೆ ಎಂದರು.
ಸಂಪುಟ ವಿಸ್ತರಣೆಯ ಪರಮಾಧಿಕಾರ ಮುಖ್ಯಮಂತ್ರಿ ಅವರಿಗಿದೆ. ಅವರು ನಿರ್ಣಯ ತೆಗೆದುಕೊಂಡಿದ್ದಕ್ಕೆ ಬದ್ಧ ಇದ್ದೇನೆ. ಉಮೇಶ ಕತ್ತಿ ಅವರಿಗೆ ಮಂತ್ರಿ ಮಾಡಲು ಮೊದಲಿನಿಂದಲೂ ಒತ್ತಾಯ ಇದೆ. ಹಿರಿಯರಾದ ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದು ಅಂತ ಹೇಳಿದ್ದೇನೆ.
ಮಂತ್ರಿ ಸ್ಥಾನ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ನನ್ನ ಮೇಲೆ ಗೌರವ ಇರುವುದಕ್ಕೆ ಕೆಲವರು ಬರುತ್ತಿದ್ದಾರೆ. ಎಲ್ಲದರಲ್ಲೂ ಭಾಗವಹಿಸಬಾರದು. ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರ ಪರವಾಗಿಯೂ ನಾನು ವಕಾಲತು ವಹಿಸುವುದಿಲ್ಲ ಎಂದು ಸಚಿವ ರಮೇಶ ತಿಳಿಸಿದರು.