ರಮೇಶ ವಿರುದ್ಧ ದೂರು ಸಲ್ಲಿಸುವೆ - ಲಕ್ಷ್ಮೀ ಹೆಬ್ಬಾಳ್ಕರ್

Laxmi Hebbalkar
Published on

ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದೇನೆ. ಅಲ್ಲದೆ, ಚುನಾವಣೆ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಸಚಿವ ರಮೇಶ ಜಾರಕಿಹೊಳಿ ಅವರು ಮಂಗಳವಾರ ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಉದ್ಘಾಟನೆ ವೇಳೆ, ‘ಹೆಬ್ಬಾಳ್ಕರ್ ನೀಡಿದ್ದ ಕುಕ್ಕರ್ ಇನ್ನೂ ಚೆನ್ನಾಗಿದೆಯಾ’ ಎಂದು ಟೀಕಿಸಿದ್ದಾರೆ. ಕುಕ್ಕರ್ ಹಂಚಿದ್ದು ನನ್ನ ದುಡ್ಡಿನಿಂದ ಎಂದಿದ್ದಾರೆ. ಆದರೆ, ನಾವು ನಮ್ಮ ಹರ್ಷ ಶುಗರ್ಸ್ ಆರಂಭೋತ್ಸವದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಅಧಿಕತವಾಗಿಯೇ ಕುಕ್ಕರ್ ವಿತರಿಸಿದ್ದೇವೆ. ಇದಕ್ಕೆ ದಾಖಲೆ ಇದೆ. ಜಿಎಸ್‌ಟಿ ಕೂಡ ತುಂಬಿದ್ದೇವೆ ಎಂದು ಶಾಸಕಿ ಲಕ್ಷ್ಮೀ ಸ್ಪಷ್ಟನೆ ನೀಡಿದ್ದಾರೆ.

ರಮೇಶ ಜಾರಕಿಹೊಳಿ ತಮ್ಮ ದುಡ್ಡಿನಿಂದ ಕುಕ್ಕರ್ ವಿತರಿಸಿದ್ದರೆ ಅದಕ್ಕೆ ಸೂಕ್ತ ದಾಖಲೆ ಮತ್ತು ಲೆಕ್ಕ ಕೊಡಲಿ. ಈ ವಿಷಯ ನ್ಯಾಯಾಲಯದಲ್ಲಿದೆ. ಆ ಕುರಿತು ಮಾತನಾಡುವುದು ನ್ಯಾಯಾಂಗ ನಿಂದನೆಯಾಗಲಿದೆ. 2-3 ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಕಾನೂನು ಕ್ರಮದ ಕುರಿತು ನಮ್ಮ ವಕೀಲರೊಂದಿಗೆ ಚರ್ಚಿಸುತ್ತೇನೆ. ರಮೇಶ ಜಾರಕಿಹೊಳಿ ತಾವು ಕ್ಯಾಬಿನೆಟ್ ಸಚಿವರಾದ ತಕ್ಷಣ ಏನು ಬೇಕಾದರೂ ಮಾತನಾಡಬಹುದು ಎಂದು ತಿಳಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಕಾಕದ ಜನರು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುವ ಕಾರಣಕ್ಕೆ ಇವರಿಗೆ ಮತ ನೀಡಿದ್ದಾರೆಯೇ ವಿನಹ ಇವರ ಮುಖ ನೋಡಿ ಮತ ಹಾಕಿಲ್ಲ. ನಾನು ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥೆ. ನನ್ನದು ಹೋರಾಟದ ರಾಜಕಾರಣ. ಬೆದರಿಕೆಗಳಿಗೆಲ್ಲ ನಾನು ಹೆದರುವವಳಲ್ಲ. ನನ್ನ ಬೆಳಗಾವಿ ತಾಲೂಕಿನ ಸ್ವಾಭಿಮಾನಿ ಜನರಿಗೋಸ್ಕರ ನನ್ನ ಹೋರಾಟ ಮುಂದುವರಿಸುತ್ತೇನೆ. ಇನ್ನಾದರೂ ರಮೇಶ ಜಾರಕಿಹೊಳಿ ತಮ್ಮ ಮದ, ಗರ್ವ, ಜಂಬ, ಅಹಂಕಾರ ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net