ತಾಳ್ಮೆಪರೀಕ್ಷಿಸದಂತೆ ಅಧಿಕಾರಿಗಳಿಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಎಚ್ಚರಿಕೆ

31 Srinivaspur -1
Published on

ಶ್ರೀನಿವಾಸಪುರ: ಅಧಿಕಾರಿಗಳ ಘನತೆ, ಗೌರವ ಹೋಗಬಾರದೆಂದು ಸಭೆಗಳಲ್ಲಿ ತಾಳ್ಮೆಯಿಂದ ನಾಲಿಗೆ ಬಿಗಿ ಹಿಡಿದು ಇರುತ್ತೇನೆ. ತಾಳ್ಮೆಪರೀಕ್ಷಿಸಲು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದಾಗ ನನಗೆ ಸಹಜವಾಗಿ ಆವೇಶ ಬರುತ್ತದೆ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿಗೆ ಮಂಜುರಾಗಿರುವ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಸೇರಿದ 285 ಸಮುದಾಯ ಭವನಗಳ ಕಾಮಗಾರಿಯನ್ನು ಜ.16ರೊಳಗೆ ಪ್ರಾರಂಭಿಸಬೇಕು. ನಂತರ ಸಬೂಬು ಹೇಳಿದರೆ ನಾನು ಸುಮ್ಮನಿರುವುದಿಲ್ಲ. ನಿಮ್ಮ-ನಮ್ಮ ವಿಶ್ವಾಸ ಕಳೆದುಕೊಳ್ಳಬೇಡಿ. ನನಗೂ ವಯಸ್ಸಾಗಿದೆ, ಬಡವರ ಋಣದಲ್ಲಿ ನಾನಿದ್ದೇನೆ. ಅವರ ಕೆಲಸ ಮಾಡಿಕೊಡುವುದು ಬೇಡವೇ ಎಂದು ಪ್ರಶ್ನಿಸಿದರು.

ತಾಲೂಕಿನಾದ್ಯಂತ ಎಲ್ಲ ಸಮುದಾಯದವರಿಗೂ ಸಮುದಾಯ ಭವನ ನಿರ್ಮಿಸಲು ಸರ್ಕಾರದ 5 ಲಕ್ಷ ರೂ. ಜತೆಗೆ ನನ್ನ ಅನುದಾನ 3 ಲಕ್ಷ ರೂ. ನೀಡಿದ್ದೇನೆ. ಇದನ್ನು ದುರುಪಯೋಗ ಮಾಡಿಕೊಂಡರೆ ಸುಮ್ಮನಿರುವುದಿಲ್ಲ ಎಂದರು.

ಜನವರಿಯಿಂದ ಮಾರ್ಚ್‌ವರೆಗೆ ಕುಡಿಯುವ ನೀರಿನ ಆಭಾವ ಎದುರಾಗದಂತೆ ಎಚ್ಚರ ವಹಿಸಬೇಕು. ಕೊಳವೆ ಬಾವಿಗಳಿಗೆ ಮೋಟಾರು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಮತ್ತು ತಾಪಂ ಅನುದಾನ ಎಲ್ಲಿ ಹೋಗುತ್ತಿದೆ. ಎಲ್ಲಿಯೂ ಕಾಮಗಾರಿ ಕಂಡುಬಂದಿಲ್ಲ. ಶಾಸಕರ ಅನುದಾನದಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಟಿಪಿಎಸ್ ಮತ್ತು ಜಿಪಂನವರು ಬಿಲ್ ಮಾಡಿಕೊಳ್ಳುತ್ತಿದ್ದಾರೆಯೇ ಎಂದು ಎಇಇ ಅಪ್ಪಿರೆಡ್ಡಿ ಅವರನ್ನು ಪ್ರಶ್ನಿಸಿ ಅದಕ್ಕೆ ಅವಕಾಶ ಕೊಡಬಾರದೆಂದು ಸಲಹೆ ನೀಡಿದರು.

ವೃದ್ಧಾಪ್ಯವೇತನ ವಿತರಿಸಿ: ದುಡಿಯಲು ಶಕ್ತಿ ಇಲ್ಲದವರಿಗೆ ಅನುಕೂಲವಾಗಲೆಂದು ಇಂದಿರಾಗಾಂಧಿ ಕಾಲದಲ್ಲಿ ಮಂಜೂರು ಮಾಡಿಸಿದ್ದ ವೃದ್ಧಾಪ್ಯವೇತನ ಇತ್ತೀಚೆಗೆ ವಿಳಂಬವಾಗುತ್ತಿದೆ. ತಕ್ಷಣದಿಂದ ಎಲ್ಲ ವೃದ್ಧರಿಗೂ ಆಯಾ ತಿಂಗಳು ವೇತನ ಸೇರಬೇಕು. ಪೋಡಿಮುಕ್ತಗೊಳಿಸಲು ಬಂದಿರುವ 700 ಅರ್ಜಿ ವಿಲೇವಾರಿ ಮಾಡಲು ಕಂದಾಯ ಇಲಾಖೆ ಕಾರ್ಯೋನ್ಮಕವಾಗಬೇಕು. ದರಖಾಸ್ತು ಸಮಿತಿಯಿಂದ ಮಂಜೂರಾಗಿರುವ ಸಾಗುವಳಿದಾರರಿಗೆ ಕೂಡಲೆ ಖಾತೆ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಸುಜಾತಾಗೆ ಹೇಳಿದರು.

ಟೊಮ್ಯಾಟೊ, ಮಾವು ಹೆಚ್ಚಾಗಿ ಬೆಳೆಯುತ್ತಿರುವ ಈ ಭಾಗದಲ್ಲಿ ಬೆಲೆ ಕುಸಿತಗೊಂಡಾಗ ಸಂಕಷ್ಟಕ್ಕೆ ಸಿಲುಕುತ್ತಿರುವ ರೈತರನ್ನು ರಕ್ಷಿಸಲು ಒಂದು ತಿಂಗಳೊಳಗೆ 10 ಶೀತಲ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಬೇಕು ಮತ್ತು ಬೆಲೆ ಸಿಗುವ ಬೆಳೆ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ಬೈರಾರೆಡ್ಡಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಸೋಮಶೇಖರ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಬೈರೆಡ್ಡಿ, ಇಒ ಆನಂದ್, ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಲಾರ ತಹಸೀಲ್ದಾರ್ ಶೋಭನಾ, ತಾಪಂ ಅಧ್ಯಕ್ಷ ನರೇಶ್ ಇದ್ದರು.

ರೈತರಿಗೆ ಕಿರುಕುಳ ನೀಡಬೇಡಿ: ಭೂರಹಿತ ರೈತರು 2-3 ತಲೆಮಾರಿನ ಹಿಂದೆ ಸಾಗುವಳಿ ಮಾಡಿ ದಾಖಲೆಗಳು ಸಕ್ರಮವಾಗಿರುವ ಜಮೀನುಗಳಿಗೆ ಅರಣ್ಯ ಇಲಾಖೆ ನಕ್ಷೆ ಗುರುತಿಸಿ ಕಿರುಕುಳ ಮಾಡುತ್ತಿದ್ದೀರಿ. ಹೊಸದಾಗಿ ಅರಣ್ಯ ಪ್ರವೇಶ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ, ಅದು ಬಿಟ್ಟು ವಿನಾ ಕಾರಣ ರೈತರಿಗೆ ಕಿರುಕುಳ ನೀಡಬೇಡಿ ಎಂದು ವಲಯ ಅರಣ್ಯಾಧಿಕಾರಿ ರಾಮಕೃಷ್ಣಪ್ಪಗೆ ರಮೇಶ್‌ಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net