ರಮೇಶ್ ಕುಮಾರ್ ಒತ್ತುವರಿ ಜಮೀನು ತೆರವಿಗೆ ಪಟ್ಟು

Protest
Published on

ಕೋಲಾರ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರ ಹೊರವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆ ತಡೆದು ಟ್ರ್ಯಾಕ್ಟರ್‌ಗಳ ಸಮೇತ ಪ್ರತಿಭಟನೆ ನಡೆಸಿ, ನಂತರ ಎಸಿ ಡಾ.ಮೈತ್ರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರಿಗೆ ಮನವಿ ಸಲ್ಲಿಸಿದರು.ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ,

ರಮೇಶ್‌ಕುಮಾರ್ ಒತ್ತುವರಿ ಮಾಡಿಕೊಂಡಿರುವ ಜಮೀನು ಒತ್ತುವರಿ ತೆರವುಗೊಳಿಸಲು ಹೈಕೋರ್ಟ್ ಆದೇಶ ಇದೆ. ಆದರೆ ಅರಣ್ಯ ಜಮೀನು ಒತ್ತುವರಿ ತೆರವು ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಮೊದಲು ಒತ್ತುವರಿ ಸಮಯದಲ್ಲಿ ಇದ್ದಂತ ಕಾಳಜಿ ಅರಣ್ಯ ಅಧಿಕಾರಿಗಳಿಗೆ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಒತ್ತುವರಿ ತೆರವುಗೊಳಿಸಲು ಜಂಟಿ ಸರ್ವೇ ತಾಂತ್ರಿಕ ದೋಷ ನೆಪದಲ್ಲಿ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.

ಶ್ರೀನಿವಾಸಪುರ ತಾಲೂಕಿನ ಜಿಂಗಾಲಗುಂಟೆ ಅರಣ್ಯ ಪ್ರದೇಶದಲ್ಲಿ 62 ಎಕರೆಯಷ್ಟು ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ. ನ.6ರಂದು ಜಂಟಿ ಸರ್ವೇ ನಡೆಸಲು ದಿನಾಂಕ ನಿಗದಿ ಮಾಡಿ ತಾಂತ್ರಿಕ ದೋಷ ನೆಪವೊಡ್ಡಿ ಮುಂದೂಡಲು ಕಾರಣವೇನು.? ಎಂದು ಕಿಡಿಕಾರಿದರು. ಡಿ.5ರೊಳಗೆ ಒತ್ತುವರಿ ತೆರೆಗವುಗೊಳಿಸಲು ಕ್ರಮವಹಿಸಬೇಕು, ಇಲ್ಲದಿದ್ದರೆ ಹೋರಾಟ ಸ್ವರೂಪವನ್ನು ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ವಾತನಾಡಿ, ವಾರದೊಳಗೆ ಕೆ.ಆರ್.ರಮೇಶ್ ಕುವಾರ್ ಹಾಗೂ ಮುಳಬಾಗಲಿನ ಅಗರ, ಕೋಲಾರ, ಬೈಯಪನಹಳ್ಳಿ ಅರಣ್ಯ ವ್ಯಾಪ್ತಿಯ ಸಾವಿರಾರು ಎಕರೆ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಮೊದಲೂ ತೆರವುಗೊಳಿಸಿದ ಜಾಗದಿಂದ ರೈತರಿಗೆ ವಾಪಸ್ ಕೊಡಿಸಲು ಚಳವಳಿ ರೂಪಿಸಲಾಗುವುದು ಎಂದು ಹೇಳಿದರು.

ಮನವಿ ಸ್ವೀಕರಿಸಿ ವಾತನಾಡಿದ ಎಸಿ ಡಾ.ಮೈತ್ರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಸರ್ವೇ ತಾಂತ್ರಿಕ ದೋಷದಿಂದ ಒತ್ತುವರಿ ವಿಳಂಭವಾಗುತ್ತಿದೆ. ಯಾವುದೇ ಒತ್ತಡಕ್ಕೆ ನಮ್ಮ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಕಾನೂನು ಪ್ರಕಾರ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮರಗಲ್ ಶ್ರೀನಿವಾಸ್, ಶಿವಾರೆಡ್ಡಿ, ಯಲ್ಲಣ್ಣ, ಹರೀಶ್, ಆಂಜಿನಪ್ಪ, ಚಂದ್ರಪ್ಪ, ರಾಜೇಶ್, ಫಾರೂಖ್ಪಾಷಾ, ಹೆಬ್ಬಣಿ ಆನಂದರೆಡ್ಡಿ, ರಾಮಕೃಷ್ಣಪ್ಪ, ಗಣೇಶ್, ಮುನಿವೆಂಕಟಪ್ಪ, ಶೈಲಜ, ರತ್ನಮ್ಮ, ಭಾಗ್ಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net