

ಮಸ್ಕಿ: ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಪೊಲೀಸ್ ಠಾಣೆ ಪಿಎಸ್‌ಐಗೆ ದೂರು ಸಲ್ಲಿಸಿದರು.
ಬೆಳಗಾವಿಯಲ್ಲಿ ಭಾನುವಾರ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅವರು ಜಾರಕಿಹೊಳಿ ಕುಟುಂಬದ ಮೇಲಿನ ವೈಯಕ್ತಿಕ ರಾಜಕೀಯ ವಿಷಯಕ್ಕಾಗಿ ವಾಲ್ಮೀಕಿ ಸಮುದಾಯ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಕೂಡಲೇ ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಾಲೂಕು ಅಧ್ಯಕ್ಷ ಆರ್.ಕೆ.ನಾಯಕ, ಪದಾಧಿಕಾರಿಗಳಾದ ದೇವಣ್ಣ ನಾಯಕ, ಮಲ್ಲಯ್ಯ ಮಲ್ಕಾಪುರ, ನಾಗರಾಜ ಚಿಗರಿ, ಸಂತೋಷ ನಾಯಕ, ಪರಶುರಾಮ ನಾಯಕ, ಮೌನೇಶ ಹಳ್ಳಿ ಇತರರಿದ್ದರು.
ರಾಯಚೂರಿನಲ್ಲಿ ಜಾತಿ ನಿಂದನೆ ಪ್ರಕರಣ
ರಾಯಚೂರು: ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಪದಬಳಕೆ ಸಂಬಂಧಿಸಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ರಾಯಚೂರಿನ ಗ್ರಾಮೀಣ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ವಾಲ್ಮೀಕಿ ಸಮುದಾಯದ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ರಮೇಶ್ ಕತ್ತಿ ವಿರುದ್ಧ ಸಮಾಜದ ಕಾಶಿನಾಥ ನೀಡಿದ ದೂರಿನ ಮೇರೆಗೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡಲಾಗಿದೆ.