

ಹುಕ್ಕೇರಿ: ಕರೊನಾ ಮಹಾಮಾರಿಯಿಂದ ಪಾಲಕರನ್ನು ಕಳೆದುಕೊಂಡ ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದ ಲಕ್ಷ್ಮೀ ಬ್ಯಾಳಿ ಶೈಕ್ಷಣಿಕ ವೆಚ್ಚ ಭರಿಸುವುದರ ಜತೆಗೆ ಅವಳ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವಿದ್ಯಾರ್ಥಿನಿ ಲಕ್ಷ್ಮೀ ಬ್ಯಾಳಿ ಅವರನ್ನು ವಿ.ಎಂ.ಕತ್ತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಕಾಲೇಜಿಗೆ ಪಿಯುಸಿ ಪ್ರಥಮ ವರ್ಷದ ಕಾಮರ್ಸ್ ವಿಭಾಗಕ್ಕೆ ದಾಖಲಿಸಿ ಮಾತನಾಡಿದರು. ನನಗೆ ಅವಳಿ ಗಂಡು ಮಕ್ಕಳಿದ್ದಾರೆ. ಇದೀಗ ಈ ಮಗುವನ್ನು ನನ್ನ ಮಗಳಂತೆ ಪೋಷಿಸಿ ಅವಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ವಿದ್ಯಾರ್ಥಿನಿ ಕಾಲೇಜು ಶುಲ್ಕವನ್ನು ರಾಜರಾಜೇಶ್ವರಿ ಟ್ರಸ್ಟ್‌ನಿಂದ ಭರಿಸಬೇಕು. ಗುಣಮಟ್ಟದ ಶಿಕ್ಷಣದ ಜತೆಗೆ ಶೈಕ್ಷಣಿಕ ಪ್ರಗತಿ ತಿಳಿಸುವಂತೆ ಪ್ರಾಚಾರ್ಯ ಎಸ್.ಎಂ.ಭಂಗಿ ಮತ್ತು ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ ಅವರಿಗೆ ಸೂಚಿಸಿದರು. ಮುಖಂಡರಾದ ಸತ್ತೆಪ್ಪ ನಾಯಿಕ, ಈರಪ್ಪ ನೇರ್ಲಿ, ನೇರ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಶೈಲ ಹಿರೇಮಠ ಇತರರಿದ್ದರು.