ವಿ.ವಿ.ಗಳಿಗೆ ಕುಲಪತಿ ನೇಮಿಸಲು ರಮೇಶ ಕೆ. ಆಗ್ರಹ

mng-16jan-ramesh
Published on


ಮಂಗಳೂರು : ರಾಜ್ಯದ ಮಂಗಳೂರು ವಿವಿ, ಕುವೆಂಪು ವಿವಿ, ರಾಣಿ ಚೆನ್ನಮ್ಮ ವಿವಿ ಮತ್ತು ಕೃಷ್ಣದೇವರಾಯ ವಿವಿಗಳಿಗೆ
ಕುಲಪತಿಗಳ ನೇಮಕವಾಗದೆ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಅವನತಿಗೆ ಕಾರಣವಾಗುತ್ತಿದೆ. ವಿ.ವಿ.ಗಳಿಗೆ ಶೀಘ್ರ
ಕುಲಪತಿಗಳನ್ನು ನೇಮಕ ಮಾಡುವಂತೆ ಮಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ರಮೇಶ ಕೆ. ಅವರು
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ವಿ.ವಿ.ಗಳಲ್ಲಿ ಖಾಯಂ ಪ್ರಾಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ನಿವೃತ್ತಿಯಾದ ಬಳಿಕ ಯಾವುದೇ ನೇಮಕಾತಿ ನಡೆಯದೆ ಅತಿಥಿ ಉಪನ್ಯಾಸಕರಿಂದ ಸಂಸ್ಥೆಗಳನ್ನು ನಡೆಸುವ ಕಾಲ ಎದುರಾಗಿದೆ. ಜತೆಗೆ ವಿವಿಗಳಿಗೆ ಖಾಯಂ ಕುಲಪತಿಗಳ ನೇಮಕವಾಗದೆ ಆಡಳಿತಾತ್ಮಕ ಸಮಸ್ಯೆ ಉಂಟಾಗಿದೆ. ಮಂಗಳೂರು ವಿವಿಯಲ್ಲಿ ಜೂನ್ ತಿಂಗಳಲ್ಲಿ ತೆರವಾದ ವಿವಿಯ ಕುಲಪತಿ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಡೀನ್ ಅವರಿಗೆ ವಹಿಸಲಾಗಿದೆ. ಅವರು ಪ್ರಮುಖವಾದ ನಿರ್ಣಯಗಳನ್ನು ತೆಗೆದುಕೊಳ್ಳದೆ ಆಡಳಿತಾತ್ಮಕವಾಗಿ ಹಲವಾರು ಸಮಸ್ಯೆಗಳು ಉದ್ಭವಿಸಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ವಿವಿಯ ಕುಲಪತಿಗಳ ಸ್ಕ್ರೀನಿಂಗ್ ಕಮಿಟಿಯ ಸಭೆಯು 2023 ಸೆಪ್ಟೆಂಬರ್ 10ರಂದು ನಡೆದು ಸರ್ಕಾರಕ್ಕೆ ಮೂವರ ಹೆಸರನ್ನು ಶಿಫಾರಸು ಮಾಡಿದ್ದರೂ ಇದುವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಅನಗತ್ಯ ವಿಳಂಬ ಮಾಡಿ ಜನರಿಗೆ ವಿವಿಯ ಮೇಲಿರುವ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಲಾಗಿದೆ. ವಿವಿಯು ಅಂಕಪಟ್ಟಿ ನೀಡದೆ-ಫಲಿತಾಂಶ ನೀಡದೆ ವಿಳಂಬ ನೀತಿಯನ್ನು ಅನುಸರಿಸುವುದರಿಂದ ವ್ಯವಸ್ಥೆಯ ಕುರಿತು ಅಪನಂಬಿಕೆಗಳು ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ನಾಗರಿಕರ ಪರವಾಗಿ ಈ ಒತ್ತಾಯ ಮಾಡುವುದರ ಮುಖಾಂತರ ವಿವಿಗೆ ಕುಲಪತಿಗಳ ನೇಮಕ ಮಾಡಲು ಆಗ್ರಹಿಸುತ್ತಿದ್ದೇವೆ ಎಂದು ರಮೇಶ ಕೆ.ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net