

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿಯನ್ನು ವೀರರಾಣಿ ಚೆನ್ನಮ್ಮಳಿಗೆ ಹೋಲಿಸುವುದು ಎಂತಹ ದುರ್ದೈವ. ಈ ಮೂಲಕ ಚೆನ್ನಮ್ಮಳಿಗೆ ಅಪಮಾನ ಮಾಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಹಿರೇಬಾಗೇವಾಡಿ ಗ್ರಾಮದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದವರು ಹಮ್ಮಿಕೊಂಡಿದ್ದ ಅಭಿಮಾನದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಒಳ್ಳೆದಾಗಬೇಕಾದರೆ ಬೆಳಗಾವಿ ಗ್ರಾಮೀಣ ಶಾಸಕಿ ಈ ಬಾರಿ ಸೋಲಲೇ ಬೇಕಾಗಿದೆ. ಉಚಗಾವಿಯಲ್ಲಿ ಮತ್ತೊಂದು ಸಮಾವೇಶ ನಡೆಸುತ್ತೇವೆ. ನಂತರ ಬಿಜೆಪಿ ವತಿಯಿಂದ ಪಕ್ಷದ ಸಮಾವೇಶ ಮಾಡುತ್ತೇವೆ. ಪಕ್ಷ ಸೂಚಿಸಿದ ಉತ್ತಮ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸೋಣ ಎಂದರು.
ಕಾಂಗ್ರೆಸ್ ಪಕ್ಷ ಇಂದು ತೀರಾ ಕೆಳಮಟ್ಟಕ್ಕೆ ಇಳಿದಿದೆ. ನಾನು ಬಹಳ ಕಳಪೆ ಮಟ್ಟದ ಭಾಷಣಕ್ಕೆ ಹೋಗುವುದಿಲ್ಲ. ಆದರೆ, ಅವರಿಗೆ ಉತ್ತರ ಕೊಡಲೇಬೇಕಾಗಿದೆ. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಶಾಸಕರ ಬಗ್ಗೆ ವೈಯಕ್ತಿಕವಾಗಿ ನಾನು ಮಾತನಾಡಲಾರೆ. ರಸ್ತೆ ಅಭಿವೃದ್ಧಿ ಮಾತ್ರ ಕ್ಷೇತ್ರದ ಅಭಿವೃದ್ಧಿ ಕೆಲಸವಲ್ಲ. ಪ್ರತಿ ವರ್ಷ ಶಾಸಕರ ಅನುದಾನ ಬರುತ್ತದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಯಾವುದೇ ಶಾಸಕರು ಇರಲಿ. ಸರ್ಕಾರದ ಅನುದಾನ ಬಿಡುಗಡೆಗೊಳಿಸುತ್ತದೆ. ಈ ನಿಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಸಹ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ, ಸಮರ್ಪಕ ಬಳಕೆಯಾಗಿಲ್ಲ ಎಂದರು.