ರಮೇಶ ಜಾರಕಿಹೊಳಿಗೆ ಬಿಜೆಪಿಯಲ್ಲಿ ಹೊಂದಾಣಿಕೆ ಆಗುತ್ತಿಲ್ಲ - ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

Ramesh-Web
Published on

ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ನಾಯಕರು. ದಿನಕ್ಕೆ ಎರಡು ಬಾರಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿಕೆ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇನ್ನೂ ಬಿಜೆಪಿಗೆ ಹೊಂದಿಕೊಂಡಿಲ್ಲ. ಎರಡು ದೋಣಿಯಲ್ಲಿ ಕಾಲಿಟ್ಟಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಸಚಿವ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಜತೆ ತಮ್ಮ ಸಂಬಂಧ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರೆ ಅವರಿಗೆ ಬಿಜೆಪಿಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದರ್ಥ. ಮತ್ತೆ ಕೈ ಪಾಳಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೋ ಅಥವಾ ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎನ್ನುವ ಮೂಲಕ ಬಿಜೆಪಿಗೆ ಎಚ್ಚರಿಕೆ ನೀಡುತ್ತಿದ್ದಾರೋ ಎಂದು ವ್ಯಂಗ್ಯವಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ 22 ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಅರ್ಧದಷ್ಟು ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕ್ರಮಕ್ಕೆ ಹೋಗಿಲ್ಲ. ಹಾಕಿದ್ದ ಖುರ್ಚಿಗಳೆಲ್ಲ ಖಾಲಿ ಇದ್ದಿದ್ದು ಇದಕ್ಕೆ ಸಾಕ್ಷಿ. ಕೆಲವರು ಸಚಿವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವಂತಿದೆ.

ಸಚಿವ ರಮೇಶ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮತ್ತೊಬ್ಬರ ಕುರಿತು ಮಾತನಾಡುವಾಗ ಎಚ್ಚರ ವಹಿಸಬೇಕು. ನನ್ನನ್ನು ಶಾಸಕಿಯನ್ನಾಗಿ ಮಾಡಿದ್ದು ಕ್ಷೇತ್ರದ ಜನರೇ ಹೊರತು ಇವರಲ್ಲ. ಇವರು, ಬೆನ್ನಿಗೆ ಚೂರಿ ಹಾಕುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. 2023ರ ಚುನಾವಣೆಯಲ್ಲಿ ರಮೇಶ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net