

ಸಾಲಿಗ್ರಾಮ: ತಾಲೂಕಿನ ಮೇಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರಾಗಿ ಶಿವರಾಮೇಗೌಡ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಆವರಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಮತ್ತು ರವಿ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಮೇಗೌಡ ಮತ್ತು ನಿಂಗರಾಜುಗೌಡ ನಾಮಪತ್ರ ಸಲ್ಲಿಸಿದ್ದರು. ಬಳಿಕ ಚುನಾವಣಾಧಿಕಾರಿ ಶಿಲ್ಪಾಶ್ರೀ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ರಮೇಶ್ 7 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ರವಿ 4 ಮತ ಪಡೆದು ಪರಾಭವಗೊಂಡರು. ಶಿವರಾಮೇಗೌಡ 8 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ನಿಂಗರಾಜುಗೌಡ 3 ಮತ ಪಡೆದು ಸೋಲುಂಡರು.
ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಂಘದಲ್ಲಿ ಯಾವುದೇ ಪಕ್ಷಭೇದ ಮಾಡದೆ ಹಾಲು ಉತ್ಪಾದನೆ ಹೆಚ್ಚು ಮಾಡುವ ಮೂಲಕ ತಾಲೂಕಿನಲ್ಲಿ ಮೇಲೂರು ಡೇರಿಯನ್ನು ಮಾದರಿಯಾಗಿಸಬೇಕು ಎಂದು ಸಲಹೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ನರೇಂದ್ರ ಕುಮಾರ್, ಡೇರಿ ನಿರ್ದೇಕರಾದ ರಮೇಶ್, ಶಿವರಾಮೇಗೌಡ, ಅಶ್ವತ್ಥ್, ಚಂದ್ರಪ್ಪ, ಪುರುಷೋತ್ತಮ, ಎಂ.ಎಸ್.ಕುಮಾರ್, ರವಿ, ನಿಂಗರಾಜುಗೌಡ, ರಾಜೇಶ್ವರಿ, ಮಂಜುಳಾ, ಎಂ.ಎನ್.ಹರೀಶ್, ಸಾ.ರಾ.ಯುವ ಸೇನೆ ರಾಜ್ಯಾಧ್ಯಕ್ಷ ಮೇಲೂರು ಗೌತಮ್, ಶಂಭುಗೌಡ, ನಾಗರಾಜೇಗೌಡ, ಪುನೀತ್, ಲೋಕೇಶ್, ಪೊಲೀಸ್ ಸಿಬ್ಬಂದಿ ಮಧುಕುಮಾರ್, ಮನು ಇತರರು ಇದ್ದರು.