

ಮಂಡ್ಯ: ಮತದಾನಕ್ಕೆ ಕೆಲವೇ ದಿನ ಬಾಕಿ ಇರುವ ವೇಳೆಯೇ ಶ್ರೀರಂಗಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಬಂಡಾಯವೆದ್ದಿದ್ದಾರೆ. ಪಕ್ಷ ಕಟ್ಟಿದವರನ್ನು ಮೂಲಗುಂಪು ಮಾಡಿ ತಮ್ಮ ಬೆಂಬಲಿಗರಿಗಷ್ಟೇ ಆದ್ಯತೆ ನೀಡುತ್ತಿರುವ ಅವರಿಗೆ 2018ರ ಚುನಾವಣೆಯಲ್ಲಿ ಆದ ಗತಿಯೇ ಈ ಬಾರಿಯೂ ಪುನರಾವರ್ತನೆಯಾಗಲಿದೆ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದು ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಕ್ಕೆ ಹಿನ್ನಡೆಯುಂಟಾಗುವಂತಹ ಮುನ್ಸೂಚನೆ ನೀಡುತ್ತಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ನೆಲಮನೆ ಸಿದ್ದಲಿಂಗೇಗೌಡ, ರಮೇಶ ಬಂಡಿಸಿದ್ದೇಗೌಡ ಮೂಲ ಕಾಂಗ್ರೆಸ್ಸಿಗರ ಕಡೆಗಣನೆಗೆ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ತಾವು ಸ್ಪರ್ಧಿಸಿರುವ ಪಕ್ಷದ ಬಗ್ಗೆ ಗೌರವವಿಲ್ಲದ ಅವರಿಗೆ ಸೋಲಾಗಲಿದೆ. ಕಳೆದ 36 ವರ್ಷದಿಂದ ಪಕ್ಷದ ಸಂಘಟನೆಗೆ ಶ್ರಮಿಸಿದ್ದ ಕಾಂಗ್ರೆಸ್ ಕಟ್ಟಾಳುಗಳನ್ನು ನಿರ್ಲಕ್ಷಿೃಸುವ ಪರಿಪಾಠ ಸರಿಯಲ್ಲ. ಮತಯಾಚನೆ ವೇಳೆ ಕಾಂಗ್ರೆಸ್ ಚಿಹ್ನೆಯನ್ನು ಮುಚ್ಚಿ ನನಗೆ ಮತ ಹಾಕಿ ಎಂದು ಮನವಿ ಮಾಡುತ್ತಿರುವುದು ನಿಷ್ಠಾವಂತ ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪಕ್ಷದ ನಾಯಕರು ಅವಮಾನಗೊಂಡಿದ್ದು, ರಮೇಶ ಬಂಡಿಸಿದ್ದೇಗೌಡ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿಸಿ ಶಕ್ತಿ ಪ್ರದರ್ಶಿಸುವಂತೆ ತಾಕೀತು ಮಾಡಬೇಕಾಗಿತ್ತು. ನಾಯಕರ ಮೌನ ಹಿರಿಯರಿಗೆ ಅವಮಾನ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ 2 ಬಾರಿ ಶಾಸಕರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಆಶಕ್ತಿ ತೋರದೆ, ಅಧಿಕಾರ ಇಲ್ಲದಿದ್ದಾಗ ಕಣ್ಣೀರು ಹಾಕುವ ರಮೇಶ ಬಂಡಿಸಿದ್ದೇಗೌಡ ಅವರು ಪಕ್ಷದ ಬಂಡಾಯ ಅಭ್ಯರ್ಥಿ ಪಿ.ಎಚ್.ಚಂದ್ರಶೇಖರ್ ಅವರನ್ನು ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ 48 ಸಾವಿರ ಮತಗಳ ಅಂತಹದಿಂದ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆ ಪುನರಾರ್ವತನೆ ಆಗಲಿದೆ. ಇವರ ವರ್ತನೆಯಿಂದ ಮೂಲ ಕಾಂಗ್ರೆಸ್ಸಿಗರು ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಈ ಹಿನ್ನೆಲೆಯಲ್ಲಿ ಒಂದೆರೆಡು ದಿನದಲ್ಲಿ ಹಿರಿಯರ ಮುಖಂಡರು ಚರ್ಚಿಸಿ ಮುಂದಿನ ನಡೆ ಏನೆಂದು ತೀರ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ರೈತ ಸಂಘದ ಮುಖಂಡ ದೊಡ್ಡಪಾಳ್ಯ ಮಾಯೀಗೌಡ ಮಾತನಾಡಿ, ಕೆ.ಎಸ್.ನಂಜುಂಡೇಗೌಡ ಅವರ ನಂತರ ಸಂಘಟನೆಯ ಅಭ್ಯರ್ಥಿಗಳು ಸ್ಪರ್ಧೆಗಿಳಿಯದ ಕಾರಣ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರನ್ನು ಬೆಂಬಲಿಸುವ ನಿರ್ಧಾರ ಮಾಡಲಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಅವರನ್ನು ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಮರಳಗಾಲ ಎಂ.ಸಿ.ಧನಂಜಯ, ದೊಡ್ಡಪಾಳ್ಯ ಮಂಜು, ಕೆ.ಪ್ರಭಾಕರ್ ಉಪಸ್ಥಿತರಿದ್ದರು.
ನಾಮಪತ್ರ ವಾಪಸ್, ಅತೃಪ್ತಿ?: ರಮೇಶ ಬಂಡಿಸಿದ್ದೇಗೌಡ ಅವರ ವಿರುದ್ಧ ಬಂಡೆದ್ದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಂಡಹಳ್ಳಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಇವರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಆದರೆ ರಮೇಶ ಬಂಡಿಸಿದ್ದೇಗೌಡ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದರಿಂದ ಬೇಸತ್ತು ನಾಮಪತ್ರ ಸಲ್ಲಿಸಿದ್ದರು. ಆದರೆ ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಮಾತಿಗೆ ಮಣಿದು ಉಮೇದುವಾರಿಕೆ ಹಿಂಪಡೆದಿದ್ದಾರೆ. ಆದರೂ ರಮೇಶ ಅವರ ಮೇಲಿನ ಅತೃಪ್ತಿ ಕಡಿಮೆಯಾಗಿಲ್ಲ ಎನ್ನುವ ಮಾತು ಪಕ್ಷದ ಅಂಗಳದಲ್ಲಿ ಕೇಳಿಬರುತ್ತಿದೆ.
ಇನ್ನು ಪಕ್ಷದ ವರಿಷ್ಠರು ಹಾಗೂ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಬೇಸತ್ತು ನಾಮಪತ್ರ ಸಲ್ಲಿಸಿರುವ ಹಿರಿಯ ಮುಖಂಡ ಪಾಲಹಳ್ಳಿ ಚಂದ್ರಶೇಖರ್ ಕಣದಲ್ಲಿಯೇ ಉಳಿದುಕೊಂಡಿದ್ದಾರೆ.