

ಅರಸೀಕೆರೆ ಗ್ರಾಮಾಂತರ: ಬದುಕಿನ ಸಾರ್ಥಕತೆಗೆ ಧರ್ಮದ ಆಚರಣೆಗಳು ಸಹಕಾರಿಯಾಗಿವೆ ಎಂದು ರಂಭಾಪುರಿ ಶ್ರೀ ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು. ದೊಡ್ಡಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಕಳಸಾರೋಹಣ ಕಾರ್ಯಕ್ರಮ ಮತ್ತು ಧರ್ಮ ಜಾಗೃತಿ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮನುಷ್ಯ ಹುಟ್ಟಿದಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಆದರೆ ಸಾವಿನ ಸಮಯದಲ್ಲಿ ಉಸಿರು ಇರುವುದಿಲ್ಲ, ಹೆಸರು ಮಾತ್ರ ಇರುತ್ತದೆ. ಆದ್ದರಿಂದ ಉತ್ತಮ ಕಾರ್ಯಗಳ ಮೂಲಕ ನಮ್ಮ ಹೆಸರು ಉಳಿಯುವಂತೆ ಮಾಡಬೇಕು ಎಂದು ಹೇಳಿದರು.
ಭಾರತವು ಅಧ್ಯಾತ್ಮದ ತವರು. ವೈವಿಧ್ಯಮಯ ಧರ್ಮ ಮತ್ತು ಸಂಪ್ರದಾಯಗಳು ಇಲ್ಲಿವೆ. ಈ ರೀತಿ ಯಾವುದೇ ದೇಶದಲ್ಲಿಲ್ಲ. ಮನುಷ್ಯ ಸ್ವಾರ್ಥದಿಂದ ಬದುಕುತ್ತಿದ್ದರೆ ಯಾವ ಅಭಿವೃದ್ಧಿಯೂ ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲಿಯೂ ಧರ್ಮ, ದೇಶದ ಬಗ್ಗೆ ಅಭಿಮಾನ ಬೆಳೆಸಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ. ಇಂದಿನ ದಿನಗಳಲ್ಲಿ ಜನರು ಧರ್ಮ ಮತ್ತು ಜಾತಿಗಳ ಅಂತರದಿಂದ ದೂರವಾಗುತ್ತಿದ್ದಾರೆ. ಆದರೆ ಮಾನವ ಧರ್ಮಕ್ಕೆ ಒಳಿತಾಗಲಿ ಎಂಬ ಸಂಕಲ್ಪವೇ ವಿಶ್ವ ಶಾಂತಿಯ ಮಾರ್ಗಎಂದು ತಿಳಿಸಿದರು.
ಬೂದಿಹಾಳ್ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ಜ್ಞಾನ ಬಿತ್ತುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ಜನರ ವಿಶ್ವಾಸವೇ ನನ್ನ ಶಕ್ತಿ :
ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಜನರ ವಿಶ್ವಾಸ ಮತ್ತು ಪ್ರೀತಿಯೇ ನನ್ನ ಶಕ್ತಿ ಎಂದರು. ಅಭಿವೃದ್ಧಿ ಇಲ್ಲದ ತಾಲೂಕು ಎಂಬ ಹೆಸರು ಪಡೆದಿದ್ದ ಅರಸೀಕೆರೆ, ಇಂದು ಜಿಲ್ಲಾ ಮಟ್ಟದಲ್ಲಿ ಮಾದರಿ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಮಠ ಮಾನ್ಯಗಳು ಸನಾತನ ಧರ್ಮವನ್ನು ಉಳಿಸಿಕೊಂಡಿದ್ದರಿಂದಲೇ ಹಿಂದುತ್ವ ಇಂದು ಜೀವಂತವಾಗಿದೆ. ಅರಸೀಕೆರೆಯು ಮಠಾಧೀಶರ ಬೀಡು. ಸಿದ್ಧರ ನಾಡು.ನಾವು ನಮ್ಮ ಇತಿಹಾಸವನ್ನು ಅರಿತುಕೊಂಡರೆ ವೈಕುಂಠಕ್ಕೆ ಹತ್ತಿರವಾಗುತ್ತೇವೆ ಎಂದರು.