ಇಷ್ಟಲಿಂಗ ಪೂಜೆಯಿಂದ ಸಂಸ್ಕಾರವಂತರಾಗಲು ಸಾಧ್ಯ

23 HANUR 5
Published on

ರಂಭಾಪುರಿ ಶ್ರೀ ಅಭಿಮತ

ಹನೂರು : ಪ್ರತಿಯೊಬ್ಬರೂ ಇಷ್ಟಲಿಂಗ ಪೂಜಿಸುವ ಮೂಲಕ ಧರ್ಮದ ಆದೇಶವನ್ನು ಪಾಲನೆ ಮಾಡಬೇಕು. ಇದರಿಂದ ಸಂಸ್ಕಾರವಂತನಾಗಿ ಹೊರಹೊಮ್ಮಲು ಸಾಧ್ಯ ಎಂದು ಬಾಳೆಹೊನ್ನೂರು ವೀರ ಸಿಂಹಾಸನ ಮಹಾ ಸಂಸ್ಥಾನ ಪೀಠದ ರಂಭಾಪುರಿ ಶ್ರೀಗಳು ತಿಳಿಸಿದರು.
ಪಟ್ಟಣದ ಶ್ರೀ ಮದ್ವೀರಶೈವ ಸದ್ಧರ್ಮ ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಜಗದ್ಗುರು ಶ್ರೀ ರೇಣುಕಾಚಾರ್ಯ ಸಭಾ ಭವನವನ್ನು ಮಂಗಳವಾರ ಉದ್ಘಾಟಿಸಿದ ನಂತರ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಪ್ರತಿ ಧರ್ಮ ತನ್ನದೇ ಆದ ಸಿದ್ಧಾಂತ ಹೊಂದಿದೆ. ಹಾಗೆಯೇ ವೀರಶೈವ-ಲಿಂಗಾಯತ ಧರ್ಮವೂ ಧಾರ್ಮಿಕ ಆಚಾರ, ವಿಚಾರವನ್ನು ಒಳಗೊಂಡಿದೆ. ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಲಿಂಗವನ್ನು ಧರಿಸಿ ಪೂಜೆ ಸಲ್ಲಿಸುವ ಮೂಲಕ ಮೋಕ್ಷ ಗಳಿಸಬಹುದಾಗಿದೆ. ಇದರಿಂದ ಸಮಸ್ಯೆ ದೂರವಾಗಿ ಫಲ ಸಿಗುತ್ತದೆ. ಇದು ಧರ್ಮದ ಸಿದ್ಧಾಂತ ಎಂದರು. ಎಷ್ಟೇ ಶ್ರೀಮಂತನಾದರೂ ಪ್ರಾಣ ಹೋದಾಗ ಸಿರಿ ಸಂಪತ್ತನ್ನು ಜತೆಯಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ. ಸಮಾಧಿ ಮಾಡುವಾಗ ಲಿಂಗವನ್ನು ಧರಿಸುವ ಪರಿಪಾಠವಿದೆ. ಆದ್ದರಿಂದ ಪ್ರತಿಯೊಬ್ಬರೂ ಇಷ್ಟಲಿಂಗವನ್ನು ಪೂಜಿಸಬೇಕು. ಇದರಿಂದ ಸಂಸ್ಕಾರದ ಜತೆಗೆ ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿ ಕಾಣಬಹುದು. ಧರ್ಮ ಪಾಲನೆಯಿಂದ ಪ್ರತಿಫಲ ದೊರಕುತ್ತಿದೆ. ಈ ಸಿಸೆಯಲ್ಲಿ ಹನೂರಿನಲ್ಲಿ ರೇಣುಕಾಚಾರ್ಯ ಸಭಾ ಭವನ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ರೈತ, ಸೈನಿಕರನ್ನು ಮರೆಯಬಾರದು: ರೈತ ದೇಶದ ಬೆನ್ನೆಲುಬಾಗಿದ್ದು, ಅನ್ನ ನೀಡುವ ಆಶ್ರಯದಾತನಾಗಿದ್ದಾನೆ. ಹಾಗೆಯೇ ಗಡಿಯಲ್ಲಿ ದೇಶ ಕಾಯುವ ಸೈನಿಕರಿಂದ ನಾವೆಲ್ಲರೂ ನೆಮ್ಮದಿ ಕಾಣಲು ಸಾಧ್ಯವಾಗಿದೆ. ಆದ್ದರಿಂದ ಇವರ ಬಾಳು ಹಸನಾಗಿರಬೇಕು ಎಂದು ಆಶಿಸಿದರು.
ಅದ್ದೂರಿ ಮೆರವಣಿಗೆ: ಸೋಮವಾರ ಸಂಜೆ ಹನೂರು ಪಟ್ಟಣಕ್ಕೆ ಆಗಮಿಸಿದ ಶ್ರೀಗಳನ್ನು ವೀರಶೈವ ಲಿಂಗಾಯತ ಹಾಗೂ ಮಧ್ವೀರಶೈವ ಸದ್ಧರ್ಮ ಸಮಾಜ ಟ್ರಸ್ಟ್‌ನ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಬಳಿಕ ಶ್ರೀಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಬೆಳ್ಳಿ ರಥದ ಮೂಲಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ವೇಳೆ ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು.
ಇಷ್ಟಲಿಂಗ ಪೂಜೆ: ಮಂಗಳವಾರ ಬೆಳಗ್ಗೆ ಸಭಾ ಭವನದಲ್ಲಿ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಟ್ರಸ್ಟ್ ವತಿಯಿಂದ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕಿ ಪರಿಮಳಾ ನಾಗಪ್ಪ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸೋಮಶೇಖರ್, ಕೊಳ್ಳೇಗಾಲದ ಪುಟ್ಟಣ್ಣ, ಜಿಲ್ಲಾ ನಿರ್ದೇಶಕ ಬಸವರಾಜಪ್ಪ, ಮುರುಡೇಶ್ವರಸ್ವಾಮಿ, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಮಧ್ವೀರಶೈವ ಸದ್ಧರ್ಮ ಸಮಾಜ ಟ್ರಸ್ಟ್ ಅಧ್ಯಕ್ಷ ವೀರಭದ್ರಸ್ವಾಮಿ, ಮುಖಂಡ ನಿಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net