

ಹೊಸಕೋಟೆ: ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಗಳ ಸಾನಿಧ್ಯದಲ್ಲಿ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಜೂ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ನಾಗಲಾಪುರ ವೀರ ಸಿಂಹಾಸನ ಮಠದ ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಜಡಿಗೇನಹಳ್ಳಿ ಹೋಬಳಿಯ ಓರೋಹಳ್ಳಿಯಲ್ಲಿ ಧರ್ಮ ಜಾಗೃತಿ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಪ್ರಯುಕ್ತ ಹೊಸಕೋಟೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಟನೆಗಳಿಂದ ಇದೇ ಮೊದಲ ಬಾರಿಗೆ ಇಷ್ಟಲಿಂಗ ಮಹಾಪೂಜೆ, ಅಡ್ಡ ಪಲ್ಲಕ್ಕಿ ಉತ್ಸವದ ಜತೆಗೆ ಬೃಹತ್ ಧರ್ಮ ಜಾಗೃತಿ ಸಮಾರಂಭವನ್ನು ನಗರದ ಸೂಲಿಬೆಲೆ ರಸ್ತೆಯ ಎಚ್ಜೆಎಸ್ಎಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದರು.
ಅಂದು ಬೆಳಗ್ಗೆ 8 ಗಂಟೆಗೆ ಜಗದ್ಗುರುಗಳ ಇಷ್ಟಲಿಂಗ ಪೂಜೆ ನೆರವೇರಲಿದ್ದು, ಪೂಜೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಸಂಜೆ 4ಗಂಟೆಗೆ ರಂಭಾಪುರಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಜರುಗಲಿದ್ದು, ನಗರದ ಮಾಮೂಲ್ ಪೇಟೆ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಿಂದ ಕಳಸ, ವೀರಗಾಸೆ, ನಂದಿದ್ವಜ, ವಾದ್ಯ ವೈಭವಗಳೊಂದಿಗೆ ಸಾಗಿ ಶ್ರೀ ಅಭಿಮುಕ್ತೇಶ್ವರ ಸ್ವಾಮಿ ದೇವಾಲಯದ ಸಭಾಭವನ ತಲುಪಲಿದೆ ಎಂದು ವಿವರಿಸಿದರು.