

ಹರಿಹರ: ಬದುಕು ಭಗವಂತ ಕೊಟ್ಟ ಅಮೂಲ್ಯ ಸಂಪತ್ತು. ಸತ್ಯ, ಶಾಂತಿ, ಸಾಮರಸ್ಯ, ಸದ್ಭಾವನೆಗಳನ್ನು ಹೊಂದಿ ಬಾಳಬೇಕು. ಭೌತಿಕ ಜೀವನ ಸಮೃದ್ಧಗೊಂಡರೆ ಸಾಲದು. ಅದರೊಂದಿಗೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಆಷಾಢ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮನುಷ್ಯನ ದೈಹಿಕ ಬೆಳವಣಿಗೆಗೆ ಆಹಾರ, ನೀರು ಮುಖ್ಯವಾಗಿರುವಂತೆ ಬದುಕಿನ ವಿಕಾಸಕ್ಕೆ ಮತ್ತು ಅಭಿವೃದ್ಧಿಗೆ ಧರ್ವಚರಣೆ ಅಗತ್ಯವಾಗಿದೆ. ವ್ಯಕ್ತಿ ಜೀವನದಲ್ಲಿ ಸಂಪತ್ತು ಗಳಿಸದಿದ್ದರೂ ಸದ್ಗುಣಗಳನ್ನು ಸಂಪಾದಿಸಿಕೊಂಡು ಬಾಳಬೇಕು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ ಎಂದರು.
ವೀರಶೈವ ಧರ್ಮ ಜ್ಞಾನ ಕ್ರಿಯೆ ಮತ್ತು ಸಾಮಾಜಿಕ ಚಿಂತನೆಗಳಿಗೆ ಆದ್ಯತೆ ಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ತತ್ವ ಸಿದ್ಧಾಂತದ ಚಿಂತನಗಳು ಜೀವಾತ್ಮ ಪರಮಾತ್ಮನಾಗಲು ಬೇಕಾದ ಸಾಧನಾ ಮಾರ್ಗದ ಅರಿವನ್ನು ಉಂಟು ಮಾಡುತ್ತವೆ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಎಲ್ಲರಲ್ಲೂ ಬೆಳೆದು ಬರುವ ಅವಶ್ಯಕತೆಯಿದೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಪಂಚಪೀಠ ವೀರಶೈವ ಧರ್ಮದ ಮೂಲ ಪೀಠವಾಗಿದೆ. ಧಾರ್ವಿುಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ರಂಭಾಪುರಿ ಶ್ರೀಗಳಿಗೆ ಸಲ್ಲುತ್ತದೆ. ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪೂಜಾ ವೈಭವ ಕಂಡವರು ನಾವು. ರಂಭಾಪುರಿ ಜಗದ್ಗುರುಗಳ ಪೂಜೆಯು ಕೈಲಾಸದಲ್ಲಿದ್ದ ಅನುಭವ ನೀಡುತ್ತದೆ. ಎಲ್ಲರ ಸಹಕಾರ ಧರ್ಮ ಪೀಠಗಳತ್ತ ಇರಬೇಕೆಂದರು.
ಅವಧೂತ ಕವಿ ಗುರುರಾಜ ಗುರೂಜಿ ಮಾತನಾಡಿ, ಸಂಪತ್ತು ಬೆಳೆದಂತೆ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಮನುಷ್ಯನಲ್ಲಿ ಮಾನವೀಯತೆ, ಕರುಣೆ ಮತ್ತು ಪರೋಪಕಾರ ಮನೋಭಾವನೆಗಳು ಬೆಳೆಯಬೇಕು. ಬದುಕಿನ ಶ್ರೇಯಸ್ಸಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಒಂದಿಷ್ಟಾದರೂ ಶಿವಜ್ಞಾನದ ಅರಿವು ಮುಖ್ಯ ಎಂದು ತಿಳಿಸಿದರು.
ನೇತೃತ್ವ ವಹಿಸಿದ ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಬೆಳಕು ಮೂಡಿಸಬೇಕೇ ವಿನಾ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು ಎಂದರು.
ಸಮಾಜದಲ್ಲಿ ಸಂಘಟನೆ ಇರಬೇಕೇ ಹೊರತು ಸಂಘರ್ಷವಿರಬಾರದು. ಅಧರ್ಮದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯಲಾರವು. ಜಗದ್ಗುರು ರೇಣುಕಾಚಾರ್ಯರ ವಿಶ್ವಬಂಧುತ್ವದ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದು ಹೇಳಿದರು.
ಹರಿಹರದ ಅ.ಭಾ.ವೀ.ಮ.ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ನಗರಸಭೆ ಮಾಜಿ ಸದಸ್ಯ ಡಿ. ಹೇಮಂತರಾಜ್, ಜವಳಿ ಸಮಾಜದ ಅಧ್ಯಕ್ಷ ಕೊಂಡಜ್ಜಿ ಈಶ್ವರಪ್ಪ ಮಾತನಾಡಿದರು.
ಗಿರೀಶ ಹೆಗ್ಗಪ್ಪನವರ, ಮಲ್ಲಪ್ಪ ಹೆಗ್ಗಪ್ಪನವರ, ಅಣ್ಣಪ್ಪ ಪೂಜಾರ, ನಾಗರಾಜ ಚಕ್ರಸಾಲಿ, ಎಚ್.ಎಂ. ಶಿವಕುಮಾರಸ್ವಾಮಿ, ಟಿ.ಜೆ. ಮುರುಗೇಶಪ್ಪನವರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತರು.
ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕೊಂಡಜ್ಜಿ ಪಂಚಾಕ್ಷರಿ, ಎನ್.ಎಚ್. ಪಾಟೀಲ್, ಎನ್.ಇ. ಸುರೇಶಸ್ವಾಮಿ, ಸಮಾಜದ ಚಂದ್ರಶೇಖರಪ್ಪ, ಸಿದ್ದಯ್ಯ ಸ್ವಾಮಿ, ಹಾಲಸ್ವಾಮಿ, ಉಪನ್ಯಾಸಕ ವಜ್ರೇಶ್ ಇತರರು ಉಪಸ್ಥಿತರಿದ್ದರು.
ಕುಮಾರಿ ಸೃಷ್ಟಿ ಅವರಿಂದ ಯೋಗ ಪ್ರದರ್ಶನ ಜರುಗಿತು. ಐಶ್ವರ್ಯ ಸ್ವಾಗತಿಸಿದರು. ಶಿಕ್ಷಕ ವಿ.ಬಿ. ಕೊಟ್ರೇಶ್ ನಿರೂಪಿಸಿದರು. ಕಾಂತರಾಜ ಮತ್ತು ವೀರೇಶ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹರಿಹರದ ಎಚ್.ಎಂ. ಸೋಮನಾಥಯ್ಯ ಸಹೋದರರು ಪ್ರಸಾದ ಸೇವೆ ಸಲ್ಲಿಸಿದರು.