

ಬಾಳೆಹೊನ್ನೂರು: ಸ್ವಾತಂತ್ರ್ಯ ಹೆಸರಿನಲ್ಲಿ ಸ್ವೇಚ್ಛಾಚಾರ ನಡೆಯುತ್ತಿರುವುದು ವಿಷಾದನೀಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲಾ ಆವರಣದಲ್ಲಿ ಸ್ವಾತಂತ್ರ್ಯೊತ್ಸವ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.
ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ಪ್ರದೇಶದಲ್ಲಿ ಉಗ್ರರ ಚಟುವಟಿಕೆ ತಡೆಗೆ ಪ್ರಯತ್ನಗಳಾಗಬೇಕಿದೆ. ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ಕೆಲಸವಾಗಬೇಕು. ಪ್ರತಿಯೊಬ್ಬರೂ ಸಂಘಟನಾತ್ಮಕವಾಗಿ ಸಾಮರಸ್ಯದಿಂದ ಬಾಳಿದರೆ ಈ ದೇಶ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಮಾಣಿಕವಾಗಿ ತಮ್ಮನ್ನು ತಾವು ದೇಶಕ್ಕೆ ಅರ್ಪಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು. ಮೋದಿ ಅವರ ದೂರದೃಷ್ಟಿತ್ವದಿಂದ ವಿಶ್ವ ಮಟ್ಟದಲ್ಲಿ ಭಾರತ ಖ್ಯಾತಿ ಪಡೆದುಕೊಳ್ಳುತ್ತಿದೆ. ಸಕಲ ಜನರ ಅಭಿವೃದ್ಧಿ, ಶ್ರೇಯಸ್ಸನ್ನು ಬಯಸುತ್ತಿರುವ ಮೋದಿ ಅವರ ಕನಸು ಸಾಕಾರಗೊಳ್ಳಬೇಕಿದೆ. ಪ್ರತಿಯೊಬ್ಬರೂ ವೃತ್ತಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ದೇಶದ ಶಕ್ತಿಯನ್ನು ಇನ್ನಷ್ಟು ಬಲಾಢ್ಯಗೊಳಿಸಲು ಶ್ರಮವಹಿಸಬೇಕು ಎಂದರು.