

ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ ತೃತೀಯ ವಾರ್ಷಿಕೋತ್ಸವ
ಆಲೂರು : ಇತಿಹಾಸ ಪ್ರಸಿದ್ಧ ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದ ಶ್ರೀ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಡಿ. 17 ರಿಂದ ಡಿ. 21ರವರೆಗೆ ನಡೆಯಲಿರುವ ಧರ್ಮ ಸಮ್ಮೇಳನ ಕಾರ್ಯಕ್ರಮಗಳಿಗೆ ಭಾನುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ರಂಭಾಪುರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ ತೃತೀಯ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಸಂಜೆ ನಡೆದ ಧರ್ಮ-ಸದ್ಭಾವನಾ ಸಭೆಯನ್ನು ತಣ್ಣೀರುಹಳ್ಳದ ಮಠದ ವಿಜಯ ಕುಮಾರ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವ ಮೂಲಕ 5 ದಿನಗಳ ಕಾರ್ಯಕ್ರಮಗಳಿಗೆ ನುಡಿ ದೀವಿಗೆ ತೋರಿದರು. ಧರ್ಮದ ಮರ್ಮವನ್ನರಿತು ಬದುಕಿದರೆ ಮಾತ್ರ ಶಾಂತಿ, ಸಾಮರಸ್ಯದ ಜೀವನ ಸಾಧ್ಯ. ಶಾಂತಿ, ತೃಪ್ತಿ, ನೆಮ್ಮದಿ ಮತ್ತು ಸಂತೊಷ ನೀಡುವುದೇ ಎಲ್ಲ ಧರ್ಮದ ಸಾರ ಆಗಿರುವಾಗ ಸೌಹಾರ್ದ ಜೀವನ ನಡೆಸೋಣ ಎಂದರು.
ವೀರಶೈವ ಧರ್ಮ ಮಹತ್ವದ್ದು: ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಹಲವು ಧರ್ಮಗಳಿವೆ ಎಲ್ಲ ಧರ್ಮಗಳ ತತ್ವಗಳು ಒಂದೆಡೆ ಸಂಗಮಿಸುತ್ತವೆ ಎಂದರೆ ಅದು ವೀರಶೈವ ಧರ್ಮದಲ್ಲಿ ಮಾತ್ರ. ವೀರಶೈವ ಧರ್ಮ ವಿಶೇಷವಾದ ಲಕ್ಷಣಗಳಿಂದ ಶೋಭಿಸುತ್ತಿದೆ. ಈ ಧರ್ಮದಲ್ಲಿ ಮಠಗಳ ಪಾತ್ರ ಬಹಳ ದೊಡ್ಡದು ಎಂದರು. ಭಾರತದಲ್ಲಿ ಧರ್ಮದ ಆಚರಣೆಗಳು ಬೇರೆಯಾದರೂ ಎಲ್ಲರ ಮೂಲ ಧ್ಯೇಯ ಮಾನವ ಧರ್ಮಕ್ಕೆ ಒಳಿತನ್ನು ಮಾಡುವುದೇ ಆಗಿದೆ. ಹಣ, ಅಧಿಕಾರ ಎಲ್ಲವನ್ನೂ ಪಡೆದಾಗಲೂ ಮಾನಸಿಕ ಶಾಂತಿ ಕೊರತೆ ಕಾಣುತ್ತಿದ್ದೇವೆ. ಸಂಸ್ಕಾರ, ಆದರ್ಶಗಳನ್ನು ಆಚರಣೆಗೆ ತಂದಾಗ ಮನುಷ್ಯನ ಬಾಳು ಬಂಗಾರವಾಗುತ್ತದೆ. ಸಾಮಾಜಿಕ ಚಿಂತನೆ, ಸ್ವ-ಧರ್ಮದ ನಿಷ್ಠೆ, ಪರ ಧರ್ಮದ ಸಹಿಷ್ಣುತೆ, ನೀತಿ, ನಿಯಮ, ನಿಯತ್ತು ಪಾಲಿಸುವುದೇ ನಮ್ಮ ಧ್ಯೇಯವಾಗಬೇಕು ಎಂದರು. ಗೌರವ ರಕ್ಷೆ ಪ್ರದಾನ:
ಶ್ರೀ ಮಠದ ವತಿಯಿಂದ ನೀಡುವ ಗೌರವ ಗುರು ರಕ್ಷೆಯನ್ನು ಆಲೂರು ತಾಲೂಕಿನ ಕರವೇ ಅಧ್ಯಕ್ಷ ನಟರಾಜ್ ರಂಗೇನಹಳ್ಳಿ, ವಕೀಲ ಮಹೇಶ್ ಮುರಡೂರು, ಚಿನ್ನದ ಪದಕ ವಿಜೇತರಾದ ನಾಕಲಗೂಡು ಗಾನವಿ ಪಟೇಲ್, ಎಚ್.ಸಿ. ರಕ್ಷಿತ್ ಅವರಿಗೆ ನೀಡಿ ಗೌರವಿಸಲಾಯಿತು. ಕೊಡ್ಲಿಪೇಟೆ ಕಲ್ಲಳ್ಳಿಮಠ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಪರಿಸರವಾದಿ ಎಚ್.ಪಿ ಮೋಹನ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್. ಶಿವಮೂರ್ತಿ, ಜಿಲ್ಲಾ ಕಾಫಿ ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಚಿಕ್ಕೋಟೆ ಇತರರು ಹಾಜರಿದ್ದರು.ಬೆಳಗ್ಗಿನಿಂದಲೂ ವಿವಿಧ ಚಟುವಟಿಕೆ : ಭಾನುವಾರ ಬೆಳಗ್ಗೆ 7 ರಿಂದಲೇ ಮಠದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಆರಂಭವಾದವು. ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಹಾ ರುದ್ರಾಭಿಷೇಕ, ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪಂಚ ಸಹಸ್ರ ದೂರ್ವಾರ್ಚನೆ, ನಾಗ ದೇವರ ಸನ್ನಿಧಾನದಲ್ಲಿ ಸಹಸ್ರ ಅಡಕೆ -ಹೊಂಬಾಳೆ ಪುಷ್ಪಾರ್ಚನೆ, ಮಠದ ಮುಂಭಾಗ ರುದ್ರಹೋಮ ನೆರವೇರಿತು.
2