ಧರ್ಮದ ವಿರುದ್ಧ ನಡೆಯಿಂದ ಅಸಮಾನತೆ

01 HNL
Published on

ಹೊನ್ನಾಳಿ: ಪ್ರಸ್ತುತ ದಿನಗಳಲ್ಲಿ ಮನುಷ್ಯ ಧರ್ಮ, ಸಂಸ್ಕೃತಿ ವಿರುದ್ಧ ನಡೆದುಕೊಳ್ಳುವುದರಿಂದ ಎಲ್ಲ ರಂಗಗಳಲ್ಲಿ ಅಸ್ವಸ್ಥತೆ ಹಾಗೂ ಅಸಮಾನತೆ ಎದ್ದು ಕಾಣುತ್ತಿವೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ಶಿಲಾಮಂದಿರ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮ ನೆರವೇರಿಸಿದ ನಂತರ ಆಶೀರ್ವಚನ ನೀಡಿ, ವ್ಯಕ್ತಿ ಶಕುನಿಯಾದರೆ ಸಮಾಜ ಛಿದ್ರಗೊಳ್ಳುತ್ತದೆ, ವೀರಭದ್ರನಂತಾದರೆ ಸುಭದ್ರಗೊಳ್ಳುತ್ತದೆ ಎಂದರು.

ಸುಂದರವಾದ ದೇವಾಲಯ ಹಾಗೂ ದೇವರ ಮೂರ್ತಿಗಳನ್ನು ನೋಡಿದಾಗ ನಾಸ್ತಿಕನೂ ಕೂಡ ಆಸ್ತಿಕನಾಗುತ್ತಾನೆ. ಪಾಲಕರು ಮಕ್ಕಳನ್ನು ಜ್ಞಾನವಂತರನ್ನಾಗಿಸುವ ಜತೆಗೆ ಬಾಲ್ಯದಲ್ಲೇ ಸಂಸ್ಕಾರ, ಸದ್ವಿಚಾರ ಕಲಿಸಬೇಕು. ಸಮಾಜದಲ್ಲಿ ಸಾಮರಸ್ಯದಿಂದ ಬದುಕಿ ಬಾಳಲು ಪುಣ್ಯ ಪುರುಷರ ಆದರ್ಶ ಪರಿಪಾಲಿಸಬೇಕು ಎಂದು ತಿಳಿಸಿದರು.

ಪಟ್ಟಾಧಿಕಾರಕ್ಕೆ 33 ಸಂವತ್ಸರ : ರಂಭಾಪುರಿ ಪೀಠಕ್ಕೆ ತಾವು ಪಟ್ಟಾಧಿಕಾರವಾಗಿ ಇಂದಿಗೆ 33 ವರ್ಷಗಳು ತುಂಬಿದ್ದು, ಇದೇ ವೇಳೆ ದೇವಸ್ಥಾನ ಉದ್ಘಾಟನೆಗೆ ಹೊನ್ನಾಳಿಗೆ ಆಗಮಿಸಿರುವುದು ಒಂದು ಸುಯೋಗವಾಗಿದೆ. ಇದರಿಂದ ತಮಗೆ ಹೆಚ್ಚು ಸಂತೋಷವಾಗಿದೆ ಎಂದು ಹೇಳಿದರು.

ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠ, ಮಂದಿರಗಳು ಶಾಂತಿ ಸಮಾಧಾನ ನೀಡುವ ನೆಮ್ಮದಿ ತಾಣವಾಗಿವೆ. ಕೋಟ್ಯಂತರ ಜನ ಶಾಂತಿ, ಪುಣ್ಯ ಪ್ರಾಪ್ತಿಗಾಗಿ ಉತ್ತರ ಭಾರತದ ಕುಂಭಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ದೇವರ ಸ್ಮರಣೆಯ ಜತೆಗೆ ತಂದೆ-ತಾಯಿಯರ ಪೋಷಣೆ ಮಾಡಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಒಂದು ಕಾಲದಲ್ಲಿ ಸಣ್ಣ ಗುಡಿಯಾಗಿದ್ದ ಈ ಜಾಗದಲ್ಲಿ ಇಂದು ಅದ್ಭುತ ಶಿಲಾಮಂದಿರ ನಿರ್ವಣವಾಗಿರುವುದು ಎಲ್ಲರ ಸುದೈವವಾಗಿದೆ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟಣ ಶೆಟ್ಟಿ ಪರಮೇಶ್, ಕುರುಬ ಸಮಾಜದ ಮುಖಂಡ ಎಚ್.ಬಿ.ಗಿಡ್ಡಪ್ಪ ಮಾತನಾಡಿದರು. ಮುಖಂಡರಾದ ಎಚ್.ಎ.ಉಮಾಪತಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ, ಎಂ.ಪಿ.ಎಂ.ಚನ್ನಬಸಯ್ಯ, ಚನ್ನಯ್ಯ ಬೆನ್ನೂರುಮಠ್, ಹಳಕಟ್ಟೆ ಶಿವಕುಮಾರ್, ರಾಜಪ್ಪ, ಸಣ್ಣಕ್ಕಿ ಬಸವಗೌಡ, ಪ್ರೇಮ್ ಕುಮಾರ್,ಭಂಡಿಗಡಿ, ಕೋರಿ ದೀಪು, ಎಚ್.ಆರ್.ಗಂಗಾಧರ್ ಇದ್ದರು.

ದೇವಸ್ಥಾನ ಉದ್ಘಾಟನೆ ಪ್ರಯುಕ್ತ ಬೆಳಗ್ಗೆ ರಂಭಾಪುರಿ ಜಗದ್ಗುರುಗಳನ್ನು ಅಲಂಕರಿಸಿದ ಸಾರೋಟ್​ನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿವಿಧ ಕಲಾ ಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಕರೆ ತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net