

ಹರಿಹರ: ಪ್ರಸ್ತುತ ಸಮಾಜದಲ್ಲಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಸಂಬಂಧಗಳು ಗಟ್ಟಿಗೊಳ್ಳಲು ಹೃದಯ ಶ್ರೀಮಂತಿಕೆ ಬೇಕು. ನಿಜವಾದ ಅಧ್ಯಾತ್ಮ ಅರಿವಿನಿಂದ ಬದುಕಿಗೆ ಶಾಂತಿ ದೊರಕುವುದೆಂದು ಬಾಳೆಹೊನ್ನೂರು ರಂಭಾಪುರಿ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರು ಹೇಳಿದರು.
ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮಗಾಗಿ ಹೇಗೆ ಸುಖ ಸಂತೋಷ ಬಯಸುತ್ತೇವೆಯೋ ಅದೇ ರೀತಿ ಇತರರ ಸಂತೋಷ ಬಯಸುವುದು ನಿಜವಾದ ಧರ್ಮ. ಒಳ್ಳೆಯ ಹೆಸರು ಹಣಕ್ಕಿಂತಲೂ ಹೆಚ್ಚು ಬೆಲೆ ಬಾಳುವಂತದ್ದು. ಸುಳ್ಳಿಗೆ ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ. ಮುಳ್ಳಿನ ನಡುವೆ ಗುಲಾಬಿ ಹೂ ಸುಗಂಧ ಪರಿಮಳ ಬೀರುವ ಹಾಗೇ ಕಷ್ಟಗಳ ನಡುವೆ ಬಾಳಿ ಬದುಕಿದರೂ ಆದರ್ಶಗಳನ್ನು ಬಿಡಬಾರದು. ಕೈಲಾಸಕ್ಕಿಂತ ಕಾಯಕ, ಧರ್ಮಕ್ಕಿಂತ ದಯೆ, ಅರಿವಿಗಿಂತ ಆಚಾರ, ಅಧಿಕಾರಕ್ಕಿಂತ ಅಭಿಮಾನ, ಭೌತಿಕ ಆಸ್ತಿಗಿಂತ ಆರೋಗ್ಯ, ಮಾನ ಸನ್ಮಾನಕ್ಕಿಂತ ಸಂಸ್ಕಾರ ಸಂಸ್ಕೃತಿ ಅತ್ಯಂತ ಮುಖ್ಯ ಎಂದರು.
ಬಾಳಿನ ಬನ ಚಿಗುರಲು ಗುರು ಕಾರುಣ್ಯ ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಹೃದಯ ಹೃದ್ಭೂಮಿ ಕೃಷಿಗೈದು ಶಿವಜ್ಞಾನ ಎಂಬ ತೈಲವನ್ನೆರೆದು ಶಿವಜ್ಞಾನವೆಂಬ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ನಿಜವಾದ ಗುರು ಎಂದು ತಿಳಿಸಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಭೌತಿಕ ಬದುಕು ಸದೃಢಗೊಳ್ಳಲು ಧರ್ಮದ ಅರಿವು ಆಚರಣೆ ಮುಖ್ಯ. ಜೀವನದ ಜಂಜಾಟದಲ್ಲಿ ಸಿಲುಕಿರುವ ಮನುಷ್ಯನಿಗೆ ಗುರು- ಹಿರಿಯರ ಆಶೀರ್ವಾದ ಅವಶ್ಯಕ. ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯವೆಂದರು.
ಹರಪನಹಳ್ಳಿ ತಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮಕ್ಕೆ ಗಂಡು-ಹೆಣ್ಣು, ಮೇಲು-ಕೀಳು, ಬಡವ-ಬಲ್ಲಿದ ಎನ್ನದೆ ಎಲ್ಲರಿಗೂ ಸಂಸ್ಕಾರ ನೀಡಿದ ಶ್ರೇಯಸ್ಸಿದೆ ಎಂದರು.
ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಶಾಸಕ ಬಿ.ಪಿ. ಹರೀಶ್ ಅವರಿಗೆ ರಂಭಾಪುರಿ ಶ್ರೀಗಳು ಧರ್ಮಸೇವಾ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.
ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ಪಟೇಲ್ ಬಸವರಾಜಪ್ಪ, ಗಜಾಪುರದ ಪ್ರವೀಣ್ ಗುತ್ತೂರು, ಮಲ್ಲಜ್ಜರ ವಿರೂಪಾಕ್ಷಪ್ಪ, ಎನ್.ಎಚ್. ಪಾಟೀಲ, ವೀರೇಶ್ ಮೊದಲಾದ ಗಣ್ಯರಿಗೆ ಮತ್ತು ದಾನಿಗಳಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಗೌರಿಶ್ರೀ, ಕೊಂಡಜ್ಜಿ ಶಾಂಭವಿ, ತೇಜಶ್ರೀ ಬಾಲಿಕೆಯರು ಭರತನಾಟ್ಯ ಮಾಡಿದರು. ಭ್ರಮರಾಂಬಿಕಾ ದೇವಿ ನುಡಿ ಸೇವೆ ಮಾಡಿದರು. ಶಾಂತಕುಮಾರಿ ಸ್ವಾಗತಿಸಿದರು. ಗುರು ಬಸವರಾಜ ಮತ್ತು ಡಾ. ಶ್ವೇತಾ ನಿರೂಪಿಸಿದರು. ಕಾಂತರಾಜ ಮತ್ತು ವೀರೇಶ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಇತರರಿದ್ದರು.
ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಸಭಾಂಗಣದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.