

ಹುಬ್ಬಳ್ಳಿ: ಹೊರಗಿನ ಕತ್ತಲೆಯನ್ನು ದೀಪ ಕಳೆದರೆ ಅಂತರಂಗದಲ್ಲಿ ಮನೆ ಮಾಡಿದ ಅಜ್ಞಾನವನ್ನು ಗುರು ತನ್ನ ಉಪದೇಶದ ಮೂಲಕ ತೊಡೆದು ಹಾಕುತ್ತಾನೆ. ಒಳ್ಳೆಯ ಗುಣಗಳನ್ನು ನಾವು ಸಂರಕ್ಷಿಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದು ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಇಲ್ಲಿಯ ವಿದ್ಯಾನಗರ ರಂಭಾಪುರಿ ವೀರಗಂಗಾಧರ ಸಮುದಾಯ ಭವನ ಆವರಣದ ಶ್ರೀ ಜಗದ್ಗುರು ರೇಣುಕಾಚಾರ್ಯ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ದೀಪೋತ್ಸವ ಮಂಗಲ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಒಳ್ಳೆಯ ಹಾಗೂ ಕೆಟ್ಟ ಗುಣಗಳು ಬೆಳೆಯುತ್ತಿರುತ್ತವೆ. ಕೆಟ್ಟದ್ದಕ್ಕೆ ಸಹಾಯ ಮಾಡದಿದ್ದರೂ ತೀವ್ರವಾಗಿ ಬೆಳೆಯುತ್ತದೆ. ಹಾಗಾಗಿ ಉತ್ತಮವಾದುದ್ದಕ್ಕೆ ಮನುಷ್ಯನಲ್ಲಿ ತುಡಿತ ಇರಬೇಕು. ಅಂದಾಗ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸುಳ್ಳದ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಮಾತನಾಡಿ, ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ನೀಡುವುದೇ ಕಾರ್ತಿಕೋತ್ಸವ. ಎಲ್ಲರ ಜೀವನದಲ್ಲಿ ಬೆಳಕು ಮೂಡಲಿ ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಶಾಂತಿ, ಸಮಾಧಾನದಿಂದ ಬದುಕಿ ಎಲ್ಲೆಡೆ ಸಾಮರಸ್ಯ ಹರಡಬೇಕು ಎಂದು ಹೇಳಿದರು.
ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಧರ್ಮ ಇದೆ. ಅದನ್ನು ಪಾಲನೆ ಮಾಡಿದರೆ ಶಾಂತಿ ನೆಮ್ಮದಿ ಎಲ್ಲೆಡೆ ನೆಲೆಸುತ್ತದೆ ಎಂದರು.
ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ಎ. ಭಾಗ್ಯಲಕ್ಷ್ಮಿ, ಮಧು ಹೊಸಮಠ, ಶಮಾ ಜವಳಕರ, ಕೃತಿಕಾ, ಅಮೃತ ನೂಲಿ ಅವರನ್ನು ಸನ್ಮಾನಿಸಲಾಯಿತು. ಸುವರ್ಣ ಸಂಭ್ರಮ ಪ್ರಶಸ್ತಿ ಪಡೆದ ರಾಧಿಕಾ ಶಿಗ್ಗಾಂವಿ, ನಿಂಗನಗೌಡ ಮರಿಗೌಡರ, ತೇಜಶ್ವಿನಿ ಪಂಚಗಟ್ಟಿ,ಡಾ. ರಾಮು ಮೂಲಗಿ ಅವರನ್ನು ಗೌರವಿಸಲಾಯಿತು.
ಡಾ. ಎಸ್.ಪಿ. ಬಳಿಗಾರ, ಆನಂದ ಕಮತಗಿ, ಬಸವರಾಜ ಕಲ್ಯಾಣಿಮಠ, ಶಿವಯೋಗಿಮಠ, ಪುಷ್ಪಾ ಹಿರೇಮಠ, ಪರಮೇಶ್ವರಪ್ಪ ಶಿರಕೋಳ ಅವರಿಗೆ ಗುರುರೆ ನೀಡಲಾಯಿತು.
ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಪಾರ್ವತಿ ಮಹಿಳಾ ಮಂಡಳ ಅಧ್ಯಕ್ಷೆ ಇಂದುಮತಿ ಮಾನ್ವಿ, ಇತರರು ಉಪಸ್ಥಿತರಿದ್ದರು.
ಜಗದ್ಗುರು ರಂಭಾಪುರೀಶ್ವರ ಸಾಂಸತಿಕ ಸೇವಾ ಸಂದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿದರು. ಗದಗಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.