ಬೆಂಗಳೂರು ನಗರದೆಲ್ಲೆಡೆ ರಾಮಭಕ್ತ ಹನುಮ ಧ್ಯಾನ

hanuma jayanthi
Published on

ಬೆಂಗಳೂರು: ರಾಜಧಾನಿಯಲ್ಲಿ ಹನುಮ ಜಯಂತಿ ಹಿನ್ನೆಲೆ ಭಾನುವಾರ ರಾಮಭಕ್ತನಾದ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡು ಭಕ್ತಿಭಾವ ಸಮರ್ಪಿಸಿದರು.

ಬಹುತೇಕ ಆಂಜನೇಸ್ವಾಮಿ ಹಾಗೂ ಶ್ರೀರಾಮ ದೇಗುಲಗಳಲ್ಲಿ ಹೆಚ್ಚಿನ ಜನಸಂದಣಿ ಕಂಡಿತು. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳು ಹಾಗೂ ಇತರ ದೇಗುಲಗಳಲ್ಲಿ ಸಮಿತಿ ವತಿಯಿಂದ ವಿಶೇಷ ಪುಷ್ಪಾಲಂಕಾರ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ದೇಗುಲಕ್ಕೆ ಧಾವಿಸಿ ಬಂದು ಬಜರಂಗ ಬಲಿಯ ದರ್ಶನ ಪಡೆದು ಪುನೀತರಾದರು. ಹಲವೆಡೆ ಭಜನೆ, ಹರಿಕಥೆ, ಭಕ್ತಿಗೀತೆಗಳ ಗಾಯನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ಗುಡಿಗಳಲ್ಲಿ ಹನುಮಾನ್ ಚಾಲೀಸ ಪಠಿಸುವವರ ಸಂಖ್ಯೆಯೂ ಹೆಚ್ಚಿತ್ತು.

ಮಹಾಲಕ್ಷ್ಮೀ ಲೇಔಟ್‌ನ ವೀರಾಂಜನೇಯಸ್ವಾಮಿ ದೇವಸ್ಥಾನ, ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇಗುಲ, ವಿಜಯನಗರದ ಮಾರುತಿ ಮಂದಿರ, ಯಶವಂತಪುರದ ದಾರಿ ಆಂಜನೇಯಸ್ವಾಮಿ ದೇವಸ್ಥಾನ, ಜಯನಗರದ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇಗುಲಗಳು ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಜನರು ಹನುಮ ಜಯಂತಿ ಸಂಭ್ರಮದಲ್ಲಿ ಪಾಲ್ಗೊಂಡರು.

ಬ್ರಹ್ಮರಥೋತ್ಸವಕ್ಕೆ ಜನಸಾಗರ:

ಉತ್ತರಹಳ್ಳಿ ವೀರಾಂಜನೇಯಸ್ವಾಮಿ ದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ನಗರದ ದಕ್ಷಿಣ ಭಾಗದ ಹಲವು ಪ್ರದೇಶಗಳಿಂದ ಭಕ್ತರ ದಂಡೇ ಹರಿದುಬಂದಿತ್ತು. ಬೆಳಗ್ಗೆ ಕಲಶಾರಾಧನೆ, ರಾಮತಾರಕ ಹೋಮ ಸಹಿತ ಹಲವು ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಮಧ್ಯಾಹ್ನ 12ರ ಬಳಿಕ ಸ್ವಾಮಿಯನ್ನು ಅಲಂಕೃತ ರಥದಲ್ಲಿ ಕೂರಿಸಿ ತೇರನ್ನು ಎಳೆಯಲಾಯಿತು. ರಾವುಗೊಡ್ಲುವಿನಲ್ಲಿ ಶ್ರೀ ಗುಂಡಾಂಜನೇಯಸ್ವಾಮಿ ದೇಗುಲದಲ್ಲಿ ಹನುಮ ಜಯಂತಿಯು ಶ್ರೀ ತುಳಸಿ ಪುಷ್ಪ ಬೃಂದಾವನೋತ್ಸವದೊಂದಿಗೆ ನೆರವೇರಿತು.

ಇತಿಹಾಸ ಪ್ರಸಿದ್ಧ ಹನುಮಂತನಗರದ ರಾಮಾಂಜನೇಯ ರಸ್ತೆಯಲ್ಲಿರುವ ಗುಡ್ಡದ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ದೇವರಿಗೆ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಯಿತು. ಹಲವೆಡೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಗಮನ ಸೆಳೆದ ಹನುವ ವೇಷಧಾರಿಗಳು:

ಹನುಮ ಜಯಂತಿ ಹಿನ್ನೆಲೆಯಲ್ಲಿ ಕೆಲ ಆಂಜನೇಯ ದೇಗುಲಗಳ ಬಳಿ ಹನುಮನ ವೇಷಧಾರಿಗಳು ವಿಶೇಷ ಆಕರ್ಷಣೆಗೆ ಒಳಗಾದರು. ರಾಮ ಸೀತೆ, ಲಕ್ಷ್ಮಣ, ಆಂಜನೇಯನ ವೇಷವನ್ನು ತೊಟ್ಟು ಭಕ್ತರ ಗಮನ ಸೆಳೆದರು. ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದ ಶ್ರೀ ಗುಂಡಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪಾಲಕರೊಬ್ಬರು ತಮ್ಮ ಮಗುವಿಗೆ ಗದಾಧಾರಿ ಆಂಜನೇಯನ ವೇಷ ತೊಡಿಸಿ ಕರೆತಂದಿದ್ದರು. ಈ ಪುಟ್ಟ ಬಾಲಕನೊಂದಿಗೆ ಭಕ್ತರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net