

ವಿಜಯವಾಣಿ ಸುದ್ದಿಜಾಲ ಗದಗ
ಹಿಂದೂ ಸಂಸತಿ, ವೀರಶೈವ ಧರ್ಮ ಪರಂಪರೆಗೆ ದಕ್ಕೆ ಉಂಟುಮಾಡುವ ಕಾನೂನು ಜಾರಿ ಮಾಡಬಾರದು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ಗುರುವಾರ ಗದಗ ನಗರದ ಸೂಡಿ ಜುಕ್ತಿ ಹಿರೇಮಠದ ಜಗದ್ಗುರು ವಿಶ್ವಾರಾಧ್ಯ ಮಂದಿರದಲ್ಲಿ ಲಿಂ. ಕೊಟ್ಟೂರು ಬಸವೇಶ್ವರ ಶ್ರೀಗಳ 105ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಯಾರನ್ನೋ ತುಷ್ಠೀಕರಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡುತ್ತಿದೆ. ತರಾತುರಿಯಲ್ಲಿ ಕಾಂಗ್ರೆಸ್ ಈ ನಿರ್ಧಾರವನ್ನು ಕೈಗೊಳ್ಳುತ್ತಿದೆ. ದುಡುಕಿನ ನಿರ್ಧಾರದಿಂದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ದಕ್ಕೆ ಆಗುತ್ತದೆ. ಬಿ. ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದಕ್ಕಾಗಿ ವೀರಶೈವ ಲಿಂಗಾಯತ ಸಮಾಜ ನೋವು ವ್ಯಕ್ತಪಡಿಸಿ ಕಾಂಗ್ರೆಸ್ ಬೆಂಬಲಿಸಿದ ಕಾರಣ ಕಾಂಗ್ರೆಸ್ ಪಕ್ಷ 135 ಸ್ಥಾನ ಗೆಲ್ಲಲೂ ಸಾಧ್ಯವಾಯಿತು ಎಂದರು. ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿ ಜಾರಿ ಮಾಡುವುದು ಸುಲಭವಲ್ಲ. ರಾಜ್ಯದ ಅಭಿವೃದ್ಧಿ ಹಾಗೂ ನೀರಾವರಿ, ರೈತರ ಹಿತಕ್ಕೆ ಇಂತಹ ಯೋಜನೆಗಳಿಂದ ಪೆಟ್ಟು ಬಿಳಬಹುದು ಎಂದು ಶ್ರಿಗಳು ಹೇಳಿದರು.
ಮಠಗಳ ಅನುದಾನ ಕಡಿತ ಬೇಡ:
ರಚನಾತ್ಮಕ ಕಾರ್ಯ ಮಾಡುವುದಕ್ಕೆ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಹಿಂದಿನ ಸರ್ಕಾರ ಮಠ ಮಂದಿರಗಳಿಗೆ ನೀಡಿದ ಅನುದಾನ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಧರ್ಮ ಪೀಠಗಳು, ಮಠಗಳು, ಸಾರ್ವಜನಿಕವಾಗಿ ಉಪಯುಕ್ತ ಕಾರ್ಯ ಮಾಡುತ್ತಿವೆ. ಅಂತಹ ಮಠಗಳ ಅನುದಾನಕ್ಕೆ ತಡೆ ನೀಡಿದರೆ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಬಹುದು. ಅನುದಾನ ಶ್ರೀ ಬಿಡುಗಡೆ ಮಾಡಬೇಕೆಂದು ಆಗ್ರಹ ಮಾಡುತ್ತೇನೆ ಎಂದು ಹೇಳಿದರು.