ರಾಮಾಯಣ ಜಗತ್ತಿನ ಮಹಾಕಾವ್ಯ

ಪಿರಿಯಾಪಟ್ಟಣದ ದೇವರಾಜ ಅರಸು ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಿತಿನ್ ವೆಂಕಟೇಶ್ ಉದ್ಘಾಟಿಸಿದರು. ಎಚ್.ಡಿ.ಗಣೇಶ್, ಪ್ರೊ.ನಂಜುಂಡಸ್ವಾಮಿ, ನಿಸರ್ಗಪ್ರಿಯ, ಸುನಿಲ್‌ಕುಮಾರ್, ಕೆ.ಆರ್.ನಿರೂಪ, ಪಿ.ಪಿ.ಪುಟ್ಟಯ್ಯ, ಪಿ.ಎಸ್.ಹರೀಶ್ ಇತರರು ಇದ್ದರು.
ಪಿರಿಯಾಪಟ್ಟಣದ ದೇವರಾಜ ಅರಸು ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಿತಿನ್ ವೆಂಕಟೇಶ್ ಉದ್ಘಾಟಿಸಿದರು. ಎಚ್.ಡಿ.ಗಣೇಶ್, ಪ್ರೊ.ನಂಜುಂಡಸ್ವಾಮಿ, ನಿಸರ್ಗಪ್ರಿಯ, ಸುನಿಲ್‌ಕುಮಾರ್, ಕೆ.ಆರ್.ನಿರೂಪ, ಪಿ.ಪಿ.ಪುಟ್ಟಯ್ಯ, ಪಿ.ಎಸ್.ಹರೀಶ್ ಇತರರು ಇದ್ದರು.
Published on

ಪಿರಿಯಾಪಟ್ಟಣ: ಮಹರ್ಷಿ ವಾಲ್ಮೀಕಿ ಭರತ ಖಂಡಕ್ಕೆ ನೀಡಿದ ಮಹಾಕಾವ್ಯ ರಾಮಾಯಣ ಇಂದು ಜಗತ್ತಿನ ಮಹಾಕಾವ್ಯವಾಗಿದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ.ನಂಜುಂಡಸ್ವಾಮಿ ಬಣ್ಣಿಸಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಶ್ರೀ ದೇವರಾಜ ಅರಸು ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಮಹರ್ಷಿ ವಾಲ್ಮೀಕಿಯನ್ನು ಭಾರತದ ಆದಿಕವಿ ಎಂದು ಕರೆಯಲಾಗುತ್ತಿದ್ದು, ವಿಶ್ವದ ಆದಿ ಕವಿ ಎಂದು ಕರೆದರೂ ತಪ್ಪಾಗಲಾರದು ಎಂದರು.

ಹೆಣ್ಣಿಗೆ ಗೌರವ ಕೊಡುವುದನ್ನು ನಾವು ರಾಮಾಯಣದಲ್ಲಿ ಕಾಣುತ್ತೇವೆ. ರಾಮ ರಾಜ್ಯದ ಕಲ್ಪನೆಯೊಂದಿಗೆ ಮಹಾತ್ಮ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯದ ಮೂಲಕ ಶಾಂತಿ ಸಂದೇಶ ಸಾರಿದ್ದಾರೆ ಎಂದರು.

ಮಹಾನ್ ವ್ಯಕ್ತಿಗಳನ್ನು ಎಂದಿಗೂ ಜಾತಿ ಮತ್ತು ಧರ್ಮದಿಂದ ನೋಡಬಾರದು. ಕನಕದಾರು, ಬಸವಣ್ಣ ಎಲ್ಲರ ಧರ್ಮಗಳ ಸಾರ ಒಂದೇ ಎಂಬ ಸಂದೇಶ ನೀಡಿದ್ದಾರೆ ಎಂದರು.

ವಾಲ್ಮೀಕಿ ಸಮಾಜವು ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಕೊಡುಗೆ ನೀಡಿದ್ದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕಳಕಳಿಯೊಂದಿಗೆ ಸಮಾಜದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.

ಮೈಲ್ಯಾಕ್ ಅಧ್ಯಕ್ಷ ಎಚ್.ಡಿ. ಗಣೇಶ್ ಮಾತನಾಡಿ, ಬೇಡರ ಕುಟುಂಬದಲ್ಲಿ ಜನಿಸಿ ರತ್ನಾಕರ ಎಂಬ ಹೆಸರಿನಿಂದ ದರೋಡೆಕೋರನಾಗಿ ಜನರಲ್ಲಿ ಭೀತಿ ಮೂಡಿಸಿದ್ದ ವ್ಯಕ್ತಿ ಭಗವಂತನ ಪ್ರೇರಣೆಯಿಂದ ತಪಸ್ಸುಗೈದು ಮಹರ್ಷಿ ವಾಲ್ಮೀಕಿ ಆದರು. ಮನುಕುಲವು ಈ ಭೂಮಿ ಮೇಲೆ ಇರುವವರೆಗೆ ರಾಮಾಯಣ ಮಹಾಕಾವ್ಯವು ಶಾಶ್ವತವಾಗಿ ಇರುತ್ತದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ಜಗತ್ತಿಗೆ ರಾಮಾಯಣದಂತಹ ಪರಮೋಚ್ಚ ಕೃತಿಯನ್ನು ನೀಡಿರುವ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ ಎಂದರು.

ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಹಾಡಿಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ವರ್ಗಗಳ ಕುಟುಂಬಕ್ಕೆ ವರ್ಷದ 12 ತಿಂಗಳೂ ಪೌಷ್ಟಿಕ ಆಹಾರ ವಿತರಿಸುವ ಮೂಲಕ ಮಾದರಿಯಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ರಾಮು, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಪಿ.ಪಿ.ಪುಟ್ಟಯ್ಯ, ಆರ್.ಹರೀಶ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ನಾಯಕ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಸುನಿಲ್‌ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಪುರಸಭೆ ಅಧ್ಯಕ್ಷೆ ಸುವರ್ಣಮ್ಮ, ಸದಸ್ಯರಾದ ಚಾಮರಾಜು, ರವಿ, ಅಬ್ದುಲ್ ಹರ್ಷದ್, ಮುಖಂಡರಾದ ಪಿ.ಎಸ್.ಹರೀಶ್, ಸೀಗೂರು ವಿಜಯಕುಮಾರ್, ರಾಮಚಂದ್ರ, ತಿಮ್ಮನಾಯ್ಕ, ಪಿ.ಮಹದೇವ್, ಶೇಖರ್, ಶ್ರೀನಿವಾಸ್, ಈ.ಪಿ.ಲೋಕೇಶ್, ಸಣ್ಣಪ್ಪನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net