

ಕೆ.ಆರ್.ಪೇಟೆ: ರಾಮಾಯಣ ಮಹಾಕಾವ್ಯವು ರಾಮನ ಮಹಾಗುಣಗಳ ಸಂಕೀರ್ತನೆಯಾಗಿದ್ದು, ಈ ಸೃಷ್ಟಿ ಇರುವವರೆಗೂ ಶಾಶ್ವತವಾಗಿರುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿಯನ್ನು ಹೊರತು ಪಡಿಸಿ ರಾಮಾಯಣವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಮಲೇಷಿಯಾದ ಅಧ್ಯಕ್ಷರು ರಾಮನ ಪಾದುಕೆಯ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಥೈಲೆಂಡ್ ದೇಶದ ರಾಜನಿಗೆ ರಾಮನ ಹೆಸರಿನಿಂದ ಕರೆಯಲಾಗುತ್ತದೆ. ಶ್ರೀಲಂಕಾದಲ್ಲಿ ಇಂದಿಗೂ ರಾಮಾಯಣದ ಸಂಸ್ಕೃತಿಯ ಅವಶೇಷಗಳನ್ನು ಕಾಣಬಹುದು. ಶ್ರೀಲಂಕಾದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಇದ್ದರೂ ಅಲ್ಲಿ ಹನುಮನ ದೇವಾಲಯ, ಸೀತೆ ಬಂಧನದಲ್ಲಿದ್ದ ಅಶೋಕವನ, ದಶಕಂಠ ರಾವಣನಮೂರ್ತಿ, ಸಂಜೀವಿನಿ ಪರ್ವತದ ಅವಶೇಷಗಳು ಸೇರಿದಂತೆ ರಾಮಾಯಣದ ಕಾಲಘಟ್ಟದ್ದು ಎನ್ನಲಾದ ಪವಿತ್ರ ಸ್ಥಳಗಳನ್ನು ನೋಡಬಹುದು. ವಿಶ್ವವನ್ನೇ ಜಯಿಸುವ ಉದ್ದೇಶದಿಂದ ಭಾರತಕ್ಕೆ ಬಂದ ಅಲೆಕ್ಸಾಂಡರನಿಗೆ ಭಾರತದಿಂದ ಬರುವಾಗ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳನ್ನು ತರುವಂತೆ ಅವನ ಗುರುಗಳು ಹೇಳಿದ್ದರಂತೆ. ರಾಮಾಯಣದ ಮೂಲಕ ಜಗತ್ತಿನಲ್ಲಿ ಚಿರಸ್ಥಾಯಿಯಾಗಿರುವ ವಾಲ್ಮೀಕಿ ಕೇವಲ ಒಂದು ಜನಾಂಗದ ಸ್ವತ್ತಲ್ಲ. ತತ್ವಜ್ಞಾನಿಯಾದ ವಾಲ್ಮೀಕಿ ಸಮಸ್ತ ಮನುಕುಲದ ಸ್ವತ್ತು ಎಂದರು.
ಮೈಸೂರು ಮಾನಸ ಗಂಗೋತ್ರಿಯ ಪ್ರಾಧ್ಯಾಪಕಿ ಡಾ.ಎಂ.ಪುಷ್ಪಾ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷ ನಟರಾಜು, ತಹಸೀಲ್ದಾರ್ ನಿಸರ್ಗಪ್ರಿಯಾ, ತಾ.ಪಂ ಇಒ ಬಿ.ಎಸ್.ಸತೀಶ್, ಪುರಸಭೆ ಮುಖ್ಯಾಧಿಕಾರಿ ಜಗರೆಡ್ಡಿ , ಬಿಇಒ ಆರ್.ಎಸ್.ಸೀತಾರಾಮು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ದಿವಾಕರ್, ಬಿಸಿಎಂ ಅಧಿಕಾರಿ ವೆಂಕಟೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮು, ವಾಲ್ಮೀಕಿ ಸಮುದಾಯದ ಮುಖಂಡರಾದ ಕಾರಿಗನಹಳ್ಳಿ ಕುಮಾರ್, ರಾಜಾನಾಯಕ್, ನರಸನಾಯಕ್, ನರೇಂದ್ರನಾಯಕ್, ದಲಿತ ಮುಖಂಡ ಬಸ್ತಿ ರಂಗಪ್ಪ ಇತರರು ಇದ್ದರು.