ರಾಮಾಯಣ ಧರ್ಮ, ಸತ್ಯ ನಿಷ್ಠೆಯ ಕಥೆ

ರಾಮಾಯಣ ಧರ್ಮ, ಸತ್ಯ ನಿಷ್ಠೆಯ ಕಥೆ
Published on

ಹಾಸನ: ಮಹರ್ಷಿ ವಾಲ್ಮೀಕಿ ಶ್ರೇಷ್ಠ ಕವಿ, ಅವರು ರಚಿಸಿದ ರಾಮಾಯಣ ಮಹಾಕಾವ್ಯ ಕೇವಲ ಒಂದು ಕಾವ್ಯ ಅಥವಾ ಗ್ರಂಥವಷ್ಟೇ ಅಲ್ಲ, ಧರ್ಮ, ಸತ್ಯ, ನಿಷ್ಠೆಯಿಂದ ಕೂಡಿರುವ ಕಥೆಯಾಗಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾ ನಗರ ಪಾಲಿಕೆ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮಾರ್ಪಟ್ಟು, ಯಾವ ರೀತಿಯಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ನೈಜ ಉದಾಹರಣೆ ಮಹರ್ಷಿ ವಾಲ್ಮೀಕಿ ಎಂದು ಹೇಳಿದರು.

ಎಲ್ಲರಿಗೂ ಎಲ್ಲ ರೀತಿಯ ಹಕ್ಕುಗಳು ಸಿಗಬೇಕೆಂಬುದು ಮಹರ್ಷಿ ವಾಲ್ಮೀಕಿ ಅವರ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಅವರು ಬರೆದಿರುವ ಶ್ಲೋಕಗಳಿವೆ. ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆದು, ನಮ್ಮ ಮುಂದಿನ ಪೀಳಿಗೆಗೂ ತಿಳಿ ಹೇಳುವ ಕೆಲಸ ಮಾಡಬೇಕು, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಮಾಜಿ ಸಚಿವ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಈ ಹಿಂದೆ ಸಭೆ ನಡೆಸಿ ವಾಲ್ಮೀಕಿ ಸಮಾಜದವರ ಅಭಿವೃದ್ಧಿಗಾಗಿ 10 ಗುಂಟೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಆ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸೇರಿ ಸಮುದಾಯ ಭವನ ನಿರ್ಮಾಣ ಮಾಡುವುದಕ್ಕೆ ಆರಂಭಿಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಲತಾಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಮೀಕಿ ಮಹರ್ಷಿ ಆದಿಕವಿ, ಜಗತ್ತಿನ ಮೊದಲ ಕವಿ, ರಾಮಾಯಣವನ್ನು ರಚಿಸಿ ಜಗತ್ತಿಗೆ ಉಡುಗೊರೆ ನೀಡಿದ ಅವರು ಅಸಾಮಾನ್ಯರು. ಮನುಷ್ಯರಲ್ಲಿಯೇ ಅತ್ಯುತ್ತಮವಾದ ಮನುಷ್ಯ ಶ್ರೀ ರಾಮ ಅಂತಹ ಮಹಾತ್ಮರ ಕುರಿತಾಗಿ ಬರೆದು, ಅವರ ಜೀವನವನ್ನು ಪ್ರತಿಯೊಬ್ಬರೂ ಅನುಸರಿಸುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಕಾಡಿನಲ್ಲಿ ವಾಸ ಮಾಡುತ್ತಿದ್ದಂತಹ ತಳ ವರ್ಗದ ಜನರನ್ನು ಮೇಲೆತ್ತಲು ಶ್ರಮಿಸಿದಂತಹ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ ಅವರಾಗಿದ್ದಾರೆ. ಇಂದು ನಾವೆಲ್ಲರೂ ಶ್ರೀರಾಮನನ್ನು ನೆನೆಯುವಂತೆ, ಅವರ ಆದರ್ಶವನ್ನು ಪಾಲಿಸುವಂತೆ ರಾಮಾಯಣ ಪುಸ್ತಕದಲ್ಲಿ ರಾಮನ ಕುರಿತಾಗಿ ತಿಳಿಸಿಕೊಟ್ಟಿರುವ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಪ್ರಗತಿಪರ ಚಿಂತಕ ನಾಗೇಂದ್ರ ಅರಕಲವಾಡಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಮೂಲತಃ ಬೇಡರ ಜಾತಿಯಲ್ಲಿ ಜನಿಸಿ 24 ಸಾವಿರ ಶ್ಲೋಕ, 4 ಲಕ್ಷದ 80 ಸಾವಿರದ ಎರಡು ಪದ, 7 ಖಂಡಗಳನ್ನೂ ಒಳಗೊಂಡ ರಾಮಾಯಣ ರಚಿಸಿದ್ದಾರೆ. ಈ ಪುಸ್ತಕ ಭಾರತೀಯ ಸಂಸ್ಕೃತಿ, ಸಾಹಿತ್ಯ, ಧಾರ್ಮಿಕ ಕ್ಷೇತ್ರಕ್ಕೆ ನೀಡಿರುವ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ರಾಮಾಯಣ ಕಾವ್ಯದಲ್ಲಿ ಸಮಾಜಕ್ಕೆ, ಕುಟುಂಬಕ್ಕೆ ಬೇಕಾದ ಪಾತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರತಿಯೊಂದು ಪಾತ್ರವು ಇಂದಿನ ಪ್ರಸ್ತುತತೆಗೆ ಹೋಲುವ ರೀತಿಯಲ್ಲಿಯೇ ರಚಿಸಿದ್ದಾರೆ. ಪ್ರತಿಯೊಂದು ಶ್ಲೋಕಗಳು ದೊಡ್ಡ ದೊಡ್ಡ ನಿಘಂಟುಗಳಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮತ್ತು ಸಮುದಾಯದಲ್ಲಿ ಶೈಕ್ಷಣಿಕವಾಗಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ದೂದ್ ಪೀರ್ ಉಪಸ್ಥಿತರಿದ್ದರು.

ಸಮುದಾಯದ ಮುಖಂಡರು, ಸಾರ್ವಜನಿಕರು, ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮೆರವಣಿಗೆಗೆ ಚಾಲನೆ: ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆಯ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿ ಅವರು ನಮ್ಮ ದೇಶಕ್ಕೆ, ನಮ್ಮ ಜನತೆಗೆ, ನಮ್ಮ ನಾಗರಿಕತೆಗೆ ಕೊಟ್ಟ ಕೊಡುಗೆ ಅಮೋಘ, ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ ಜಗತ್ತಿಗೆ ಆಶಾಕಿರಣವಾಗಿ ಸಂಸ್ಕಾರ ಹಾಗೂ ಜಗತ್ಪ್ರಸಿದ್ಧ ರಾಮಾಯಣವನ್ನು ಕೊಟ್ಟ ಮಹಾನ್ ಕವಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ತಹಸೀಲ್ದಾರ್ ಗೀತಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೂದ್ ಪೀರ್, ಸಮುದಾಯದ ಮುಖಂಡರು, ಅಧಿಕಾರಿಗಳು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net