

ಬ್ಯಾಡಗಿ: ರಾಮಾಯಣ ಮಹಾಕಾವ್ಯದಲ್ಲಿರುವ ತತ್ವಸಿದ್ಧಾಂತ ಹಾಗೂ ಸಂದೇಶಗಳು ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯವಾಗಿದ್ದು, ಪ್ರತಿಯೊಬ್ಬರ ಜೀವನಕ್ಕೂ ದಾರಿದೀಪವಾಗಿವೆ ಎಂದು ವಾಲ್ಮೀಕಿ ಸಮಾಜದ ಗ್ರಾಮ ಘಟಕದ ಅಧ್ಯಕ್ಷ ಮಹದೇವಪ್ಪ ಓಲೇಕಾರ ಹೇಳಿದರು.
ತಾಲೂಕಿನ ಮಾಸಣಗಿ ಗ್ರಾಮ ಘಟಕದ ಆಶ್ರಯದಲ್ಲಿ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಜರುಗಿದ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ ಸಾಹಿತ್ಯಲೋಕ ವಿಶಿಷ್ಟ ಸ್ಥಾನ ಪಡೆದಿದ್ದು, ಜೀವನಕ್ಕೆ ಅಗತ್ಯವಾದ ಎಲ್ಲ ವಿಚಾರಗಳು, ನೀತಿ ನಡವಳಿಕೆಗಳು, ಮಾನವೀಯ ಮೌಲ್ಯಗಳನ್ನು ಮಹಾಕಾವ್ಯ ಒಳಗೊಂಡಿದೆ. ಸನಾತನ ಕಾಲದಿಂದಲೂ ಎಲ್ಲ ದಾರ್ಶನಿಕರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜದ ಪರಿವರ್ತನೆಗೆ ಯತ್ನಿಸಿದ್ದಾರೆ. ಈಗ ಪ್ರತಿಯೊಂದು ಮನೆಯಲ್ಲಿ ಶಿಕ್ಷಣವಂತರಿದ್ದು, ಎಲ್ಲರೂ ಆದರ್ಶ ಮೈಗೂಡಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ವಣಕ್ಕೆ ಮುಂದಾಗಬೇಕು ಎಂದರು.
ಉಪಾಧ್ಯಕ್ಷ ದುರ್ಗಪ್ಪ ತಳವಾರ ಮಾತನಾಡಿ, ಸರ್ಕಾರ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಶಿಕ್ಷಣ, ವಸತಿ, ಉದ್ಯೋಗ ಸೇರಿ ಹಿಂದುಳಿದ ಸಮುದಾಯ ವಾಸಿಸುವ ಬಡಾವಣೆಗಳ ಅಭಿವೃದ್ಧಿಗಳಿಗೆ ಹೆಚ್ಚು ಅನುದಾನ ನೀಡುತ್ತಿದೆ. ನಮಗಿರುವ ಅವಕಾಶಗಳನ್ನು ಬಳಸಿಕೊಂಡು ಮಕ್ಕಳ ಶಿಕ್ಷಣ ಪ್ರಗತಿಗೆ ಯತ್ನಿಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಮಹೇಶ ನಿಂಬಣ್ಣನವರ, ಸದಸ್ಯರಾದ ಕರಬಸಪ್ಪ ಕೋಣನವರ, ರಾಮಪ್ಪ ತಳವಾರ, ಸಚಿನ ತಳವಾರ, ಭೀಮಪ್ಪ ತಳವಾರ, ಫಕೀರಪ್ಪ ಓಲೇಕಾರ, ಆನಂದಪ್ಪ ಹಿರೇಮತ್ತೂರು, ಗ್ರಾಮಸ್ಥರಾದ ಗುರುಪಾದಯ್ಯ ಹಿರೇಮಠ, ಮಮತಾ ದೇಸಾಯಿ, ಸುಜಾತ ಬಡಿಗೇರ, ಇತರರಿದ್ದರು.