ರಾಮಾಯಣ, ಮಹಾಭಾರತ ಎರಡು ಕಣ್ಣುಗಳಿದ್ದಂತೆ

24
Published on

ಮೈಸೂರು: ಭಗವದ್ಗೀತೆ ಎನ್ನುವುದು ಜ್ಯೋತಿ ಇದ್ದಂತೆ. ಅದನ್ನು ಓದಿ ಅರ್ಥೈಸಿಕೊಂಡರೆ ಜೀವನದ ಸತ್ಯ ತಿಳಿಯುತ್ತದೆ ಎಂದರು ಲೇಖಕಿ ನರ್ಮದಾ ಎನ್.ಪ್ರಭು ಹೇಳಿದರು.

ವಿಜಯ್ ಫೌಂಡೇಷನ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನರ್ಮದಾ ಎನ್.ಪ್ರಭು ಅವರ ‘ಸರಳ ಭಗವದ್ಗೀತೆ’ ಇಂಗ್ಲಿಷ್ ಅನುವಾದಿತ ಕೃತಿ, ಡಾ.ವಿ.ರಂಗನಾಥ್ ಮತ್ತು ಎಸ್.ವೆಂಕಟೇಶನ್ ರಚನೆಯ ಡಾ.ಬಿ.ಆರ್.ಪೈ ಅವರ ಜೀವನ ಚರಿತ್ರೆ ‘ಸಾಧಕ-ಸಾರ್ಥಕ’(ಕನ್ನಡ), ‘ಸ್ಪ್ರೆಡಿಂಗ್ ಲೈಟ್’(ಇಂಗ್ಲಿಷ್) ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೇತ್ರಾಯುಗದಲ್ಲಿ ಜನಿಸಿದ ರಾಮ ಸಕಲ ಸದ್ಗುಣ, ಮರ್ಯಾದಾ ಪುರುಷೋತ್ತಮ. ರಾಮ ನಡೆದಿದ್ದೆ ನೀತಿ. ಮಾತಾಡಿದ್ದೆ ಸತ್ಯ. ಅವನ ಜೀವನವೇ ಧರ್ಮ. ಆದ್ದರಿಂದ ಅವನ ಕಥೆಯಾದ ರಾಮಾಯಣವನ್ನು ಎಲ್ಲರೂ ಓದಬೇಕು. ಅದೇ ರೀತಿ ದ್ವಾಪರಯುಗದಲ್ಲಿ ಜನಿಸಿದ ಶ್ರೀಕೃಷ್ಣ ಮಹಾಭಾರತದ ಕಥೆಯನ್ನೂ ಓದಬೇಕು. ನಮ್ಮ ಸನಾತನ ಧರ್ಮದಲ್ಲಿ ರಾಮಾಯಣ ಮತ್ತು ಮಹಾಭಾರತ ಎರಡು ಕಣ್ಣುಗಳು ಇದ್ದ ಹಾಗೆ ಎಂದರು.

ನಮ್ಮ ಸುತ್ತಮುತ್ತ ಅಪಾರ ಪುಸ್ತಕಗಳಿವೆ. ಆದರೆ, ಭಗವದ್ಗೀತೆ ಒಂದು ಕಡೆ ಹಾಗೂ ಉಳಿದ ಎಲ್ಲ ಪುಸ್ತಕಗಳು ಮತ್ತೊಂದು ಕಡೆ ಇಟ್ಟರೂ ಭಗವದ್ಗೀತೆಯ ತೂಕವೇ ಹೆಚ್ಚು. ಉಳಿದ ಎಲ್ಲ ಪುಸ್ತಕಗಳನ್ನು ನಮ್ಮಂತವರು ಅಥವಾ ಋಷಿಗಳು ಬರೆದಿದ್ದರೆ ಭಗವದ್ಗೀತೆ ಮಾತ್ರ ದೇವರು ಹೇಳಿದ ಗೀತೆ ಅಥವಾ ದೇವರ ಮಾತಾಗಿದೆ. ಮನುಕುಲದ ಒಳಿತಿಗಾಗಿ ವೇದವ್ಯಾಸ ಮುನಿಗಳು ಭಗವದ್ಗೀತೆಯನ್ನು ದಾಖಲಿಸಿದ್ದಾರೆ. ಅದನ್ನು ಎಲ್ಲರೂ ಓದಬೇಕು ಎಂದರು.

ಜೀವನದಲ್ಲಿ ಏನು ಬೇಕಾದರೂ ಸಂಪಾದಿಸಿ, ಸುಖಪಡಿ. ಸಂಪಾದಿಸಿದ ಸ್ವಲ್ಪ ಭಾಗವನ್ನು ಯೋಗ್ಯರಿಗೆ ದಾನ ಮಾಡಿ ಎಂದು ಕೃಷ್ಣ ಎನ್ನುತ್ತಾನೆ. ನಮ್ಮ ಧರ್ಮದ ಬಗ್ಗೆ ಯಾರಿಗೆ ಜ್ಞಾನ ಇದೆ ಹೇಳಿ ಎಂದು ಪ್ರಶ್ನಿಸಿದ ಅವರು, ಭಗವದ್ಗೀತೆ ಪುಸ್ತಕ ಓದಿ ತಿಳಿಯಬೇಕು. ಭಗವದ್ಗೀತೆ ಓದಿದ ಮೇಲೆ ಮನಸ್ಸಿಗೆ ಸುಖ, ನೆಮ್ಮದಿ ಸಿಗುತ್ತದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗುತ್ತಿದ್ದು, ದೇಶದ ಜನ ಎಲ್ಲ ಚಿಂತನೆಯನ್ನು ಬಿಡಬೇಕು. ಎಲ್ಲರನ್ನು ಶ್ರೀರಾಮ ಕಾಪಾಡುತ್ತಾನೆ ಎಂದರು.

ಆರ್ಷ ವಿದ್ಯಾ ಪೀಠದ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಮಾತನಾಡಿ, ಬದುಕಿನಲ್ಲಿ ಮೂರು ಸತ್ಯ ಮುಖ್ಯ. ಸಾಧ್ಯ, ಸಾಧನೆ, ಸಾರ್ಥಕತೆ ಇದ್ದರೆ ಬದುಕು ಸಾರ್ಥಕವಾಗುಗುತ್ತದೆ. ಪ್ರತಿಯೊಬ್ಬರೂ ಸಾರ್ಥಕ ಜೀವನ ಮಾಡಬೇಕು. ಅದಕ್ಕಾಗಿ ಸನ್ಮಾರ್ಗ ಅನುಸರಿಸಬೇಕು. ಇಲ್ಲವಾದರೆ ಬದುಕು ವ್ಯರ್ಥವಾಗುತ್ತದೆ. ಡಾ.ಬಿ.ಆರ್.ಪೈ ಅವರು ಸಾರ್ಥಕತೆ ಜೀವನ ಮಾಡಿದ್ದಾರೆ ಎಂದರು.

ಡಾ.ಬಿ.ಆರ್.ಪೈ, ಲೇಖಕ ಡಾ.ವಿ.ರಂಗನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net