ರಾಮಸಮುದ್ರ ನೀರು ಅಶುದ್ಧ !

ramasamudra
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಪುರಸಭಾ ವ್ಯಾಪ್ತಿಯ ವಾರ್ಡ್‌ಗಳಿಗೆ ಅಗತ್ಯ ಸಂದರ್ಭ ನೀರು ಪೂರೈಕೆ ಮಾಡುವ ನಗರದ ರಾಮಸಮುದ್ರಕ್ಕೆ ಕಲುಷಿತ ನೀರು ಸೇರುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಕಳ ಪುರಸಭೆಯ ಅನತಿ ದೂರದಲ್ಲಿರುವ ವಿಶಾಲ ಸಮೃದ್ಧ ಜಲರಾಶಿ ಹೊಂದಿರುವ ಕೆರೆಗಳ ಪೈಕಿ ರಾಮಸಮುದ್ರವೂ ಒಂದು. ಇದೇ ರಾಮಸಮುದ್ರದ ಕೆರೆಯ ನೀರನ್ನು ಮಾರ್ಚ್, ಏಪ್ರಿಲ್, ಮೇ ಅಂತ್ಯದ ಬೇಸಿಗೆಯಲ್ಲಿ ನೀರಿನ ಅಭಾವ ಕಾಡಿದಾಗ ಇಡೀ ಪುರಸಭೆ ವ್ಯಾಪ್ತಿಗೆ ಇಲ್ಲಿನ ನೀರನ್ನು ಸರಬರಾಜು ಮಾಡಲಾಗುತ್ತಿದ್ದರೂ ಇದೀಗ ಕೆರೆಯ ಸುತ್ತಲೂ ಅಲ್ಲಲ್ಲಿ ಕಲುಷಿತ ನೀರು ಬಂದು ಸೇರುತ್ತಿದೆ. ಹೀಗಾಗಿ ಕೆರೆಯ ನೀರು ಮಾಲಿನ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ನೀರನ್ನು ಜನ ಕುಡಿಯುವ ನೀರನ್ನಾಗಿ ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಕಲುಷಿತ ನೀರನ್ನು ರಾಮಸಮುದ್ರಕ್ಕೆ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಇಲ್ಲಿನ ಸ್ಥಳೀಯ ದಾನಶಾಲೆಯ ಪರಿಸರ ಹಾಗೂ ಕಂಪನಿಯೊಂದರ ತ್ಯಾಜ್ಯ ನೀರು ಸಹಿತ ಕೆರೆಯ ಪಕ್ಕದಲ್ಲಿರುವ ವಸತಿಗೃಹದಿಂದಲೂ ತ್ಯಾಜ್ಯ ನೀರನ್ನು ರಾಮ ಸಮುದ್ರಕ್ಕೆ ಬಿಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಅಲ್ಲದೆ ಕೆಲವೊಂದು ಕ್ಯಾಟರಿಂಗ್ ವ್ಯವಸ್ಥೆಯನ್ನು ಮಾಡುವವರು ಇಲ್ಲಿನ ನೀರಿಗೆ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ ಎನ್ನುವ ಆರೋಪಗಳಿವೆ. ಈಗಾಗಲೇ ಪುರಸಭಾ ಸದಸ್ಯರು ಸಾಮಾನ್ಯ ಸಭೆಯಲ್ಲಿ ಎರಡೆರಡು ಬಾರಿ ವಿಷಯವನ್ನು ಗಮನಕ್ಕೆ ತಂದರೂ ಇಲ್ಲಿವರೆಗೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಸಾಂಕ್ರಾಮಿಕ ರೋಗ ಭೀತಿ?

ಮಳೆಗಾಲದಲ್ಲೂ ಚರಂಡಿ ಮೂಲಕ ತ್ಯಾಜ್ಯ ನೀರು ನೇರವಾಗಿ ಹರಿದು ರಾಮ ಸಮುದ್ರವನ್ನು ಸೇರುತ್ತಿದೆ. ಸ್ಥಳೀಯವಾಗಿರುವ ಕಂಪನಿಯೊಂದರ ನೀರನ್ನು ನೇರವಾಗಿ ಕೆರೆಯ ನೀರಿಗೆ ಬಿಡಲಾಗುತ್ತಿದ್ದು, ಹುಳಗಳಿರುವ ತ್ಯಾಜ್ಯದ ನೀರು ಕೆರೆಯ ನೀರನ್ನು ಮಲಿನಗೊಳಿಸುತ್ತಿದೆ. ಇದೇ ನೀರನ್ನು ಪುರಸಭಾ ವ್ಯಾಪ್ತಿಯ ಜನರು ಉಪಯೋಗಿಸುವುದು ಅನಿವಾರ್ಯವಾಗಿದ್ದು, ಇದೇ ಸ್ಥಿತಿ ಮುಂದುವರಿದರೇ ನೀರನ್ನು ಉಪಯೋಗಿಸುವ ಮಂದಿಗೆ ರೋಗರುಜಿನಗಳ ಸಹಿತ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟಿಸ್ ನೀಡಿದ ಪುರಸಭೆ

ಕುಡಿಯುವ ನೀರಿಗಾಗಿ ಬಳಕೆಯಾಗುವ ರಾಮ ಸಮುದ್ರದ ನೀರಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಗಳು ಹಾಗೂ ದೂರುಗಳು ಬಂದ ಹಿನ್ನೆಲೆಯಲ್ಲಿ ಕೂಡಲೇ ಅಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ನೀರು ಹರಿಯುವ ಕಡೆಗಳಲ್ಲಿ ಮಣು ಹಾಕಿ ತ್ಯಾಜ್ಯ ನೀರು ಹರಿಯದಂತೆ ತಾತ್ಕಾಲಿಕ ಕ್ರಮವನ್ನು ಕೈಗೊಂಡಿದ್ದಾರೆ ಹಾಗೂ ಸಂಬಂಧಿಸಿದ ಕೆಲವೊಂದು ಕಡೆಗೆ, ಕಂಪನಿಗಳಿಗೆ ಈಗಾಗಲೇ ನೋಟಿಸ್ ನೀಡುವ ಕೆಲಸವನ್ನು ಮಾಡಿದರು. ಆದರೂ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.

ಸೂಕ್ತ ಕ್ರಮಕ್ಕೆ ಆಗ್ರಹ

ಇತ್ತೀಚೆಗೆ ನಡೆದ ಪುರಸಭಾ ಸಾಮಾನ್ಯಸಭೆಯಲ್ಲಿಯೂ ತ್ಯಾಜ್ಯ ನೀರು ರಾಮಸಮುದ್ರ ಸೇರುವ ಬಗ್ಗೆ ಬಾರಿ ಚರ್ಚೆಗಳು ನಡೆದಿದ್ದು, ಬರೀ ನೋಟಿಸ್ ನೀಡಿದರೆ ಸಾಲದು ತ್ಯಾಜ್ಯ ನೀರನ್ನು ರಾಮಸಮುದ್ರಕ್ಕೆ ಬಿಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಪುರಸಭಾ ಸದಸ್ಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ರಾಮ ಸಮುದ್ರದ ನೀರಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈಗಾಗಲೇ ಕೆಲವೊಂದು ಉದ್ದಿಮೆ ಸಂಸ್ಥೆಗಳಿಗೆ ಹಾಗೂ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ತಾತ್ಕಾಲಿಕವಾಗಿ ತ್ಯಾಜ್ಯ ನೀರು ಕೆರೆಯ ನೀರು ಸೇರದಂತೆ ಕ್ರಮವನ್ನು ಕೈಗೊಳ್ಳಲಾಗಿದೆ. -ರೂಪಾ ಟಿ. ಶೆಟ್ಟಿ ಪುರಸಭಾ ಮುಖ್ಯಾಧಿಕಾರಿ https://www.vijayavani.net/kinara-school-annual-sports-meet https://www.vijayavani.net/our-walk-towards-amma-in-mandarthi

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net