

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರಕೃತಿ ಪ್ರಿಯರು ಹಾಗೂ ವಿಹಾರಕ್ಕಾಗಿ ಬರುವ ಜನರಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಸುಂದರ ಪಾರ್ಕ್‌ವೊಂದು ವರ್ಷಗಳಿಂದ ಪಾಳುಬಿದ್ದಿದ್ದು, ಹುಲ್ಲು ಪೊದೆಗಳಿಂದ ಆವೃತಗೊಂಡು ಜನರ ಉಪಯೋಗಕ್ಕೆ ಬಾರದಂತಿದೆ.
ಕಾರ್ಕಳ ನಗರದ ಅನತಿ ದೂರದಲ್ಲಿರುವ ಜಲ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ವಿಶಾಲ ಕೆರೆಯಾದ ರಾಮಸಮುದ್ರದ ಬಳಿಯಲ್ಲಿ 10 ವರ್ಷಕ್ಕೂ ಮೊದಲೇ ನಿರ್ಮಿಸಿದ ಬಾಲವನದ ಜತೆಗೆ ವಿಹಾರ ತಾಣ ಇದೀಗ ಪಾಳುಬಿದ್ದಿದೆ. ಈ ಹಿಂದೆ ಸ್ಥಳೀಯ ಗ್ರಾಮಸ್ಥರು ಹಾಗೂ ದೂರದ ಊರಿಂದ ಬರುವ ಪ್ರವಾಸಿಗರು ಈ ಪಾರ್ಕ್‌ನಲ್ಲಿ ಬಂದು ಸ್ವಲ್ಪ ಕಾಲ ವಿರಮಿಸಿ ತೆರಳುತ್ತಿದ್ದರು. ಆದರೆ ಇದೀಗ ಪಾರ್ಕ್ ಪಾಳುಬಿದ್ದ ಪರಿಣಾಮ ಯಾರೋಬ್ಬರು ಇತ್ತ ಕಡೆಗೆ ಸುಳಿಯುತ್ತಿಲ್ಲ.
ಹುಲ್ಲು ಪೊದೆಗಳಿಂದ ಆವೃತಗೊಂಡ ಪಾರ್ಕ್‌ಗೆ ಪ್ರವಾಸಿಗರು ಅಥವಾ ವಿಹಾರಕ್ಕೆ ಯಾರು ಬರದೆ ಇರುವ ಬೇಂಚ್‌ಗಳಲ್ಲಿ ಕುಡುಕರು ಬಂದು ಕುಳಿತುಕೊಳ್ಳುವುದು ಮಾಮೂಲಾಗಿದೆ. ಪಾರ್ಕ್ ತುಂಬಾ ಗುಟ್ಖಾ ಪ್ಯಾಕೇಟ್‌ಗಳು ಹಾಗೂ ರಾಮ ಸಮುದ್ರದ ಪಕ್ಕದಲ್ಲಿ ಮದ್ಯದ ಬಾಟಲಿ ರಾಶಿ ಗೋಚರಿಸುತ್ತದೆ.
ಪ್ರವಾಸಿಗರ ಆಕರ್ಷಿಣಿಯ ತಾಣಗಳಲ್ಲಿ ಕಾರ್ಕಳ ಕೂಡ ಒಂದು. ಇಲ್ಲಿಗೆ ಬರುವ ಪ್ರವಾಸಿಗರ ದಂಡು ನಗರದೊಳಗಿನ ಗೊಮ್ಮಟೇಶ್ವರ ಬೆಟ್ಟ, ಆನೆಕೆರೆ, ಚತುರ್ಮುಖ ಬಸದಿ, ಹೀಗೆ ಅನೇಕ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುವುದರ ಜತೆಗೆ ಇಲ್ಲಿನ ರಾಮ ಸಮುದ್ರಕ್ಕೂ ಭೇಟಿ ನೀಡಿ ಇಲ್ಲಿನ ಸೌಂದರ್ಯ ಸವಿಯಲು ಬರುತ್ತಾರೆ. ಹೀಗೆ ಬಂದ ಪ್ರವಾಸಿಗರಿಗೆ ವಿಹಾರಕ್ಕೆ ಹಾಗೂ ವಿಶ್ರಾಂತಿಗಾಗಿ ಮತ್ತು ಮಕ್ಕಳಿಗೆ ಆಟವಾಡಲು ಸರಿಯಾದ ತಾಣ ವಿಲ್ಲದೆ ವಾಪಸ್ಸಾಗುತ್ತಿದ್ದಾರೆ.
ಮಕ್ಕಳ ಆಟಕ್ಕಾಗಿ ಇಲ್ಲಿ ನಿರ್ಮಿಸಿದ ಜೋಕಾಲಿ ತುಕ್ಕುಹಿಡಿದು ಜೋತು ಬಿದ್ದಿದೆ. ಅಲ್ಲಲ್ಲಿ ವಿಶ್ರಾಂತಿಗಾಗಿ ಕುಳಿತುಕೊಳ್ಳಲು ನಿರ್ಮಿಸಿದ ಬೆಂಚು ಪೊದೆಯಲ್ಲೇ ಆವೃತಗೊಂಡಿದೆ ಹಾಗೂ ಮಕ್ಕಳ ಆಟಿಕೆ ಜಾರು ಬಂಡಿಯೂ ಪೊದೆಯ ನಡುವೆ ಮರೆಯಾದಂತಿದೆ.
ಇರುವ ಪಾರ್ಕ್ ಪಾಳುಬಿದ್ದು ದಶಕಗಳೇ ಸಮೀಪಿಸುತ್ತಿದ್ದರೂ ನಿರ್ವಹಣೆಗೆ ಅನುದಾನವಿಲ್ಲದೆ ಪಾರ್ಕ್ ಪಾಳುಬೀಳುವಂತಾಗಿದೆ. ಈಗಲೂ ಈ ಪಾರ್ಕ್ ಅಭಿವೃದ್ಧಿಗೆ ಪುರಸಭೆಯಲ್ಲಿ ಸರಿಯಾದ ಅನುದಾನದ ಕೊರತೆ ಎದ್ದು ತೋರುತ್ತಿದ್ದು, ಮುಂದಿನ ದಿನಗಳಲ್ಲಿ ಯಾವುದಾರೂ ಅನುದಾನ ಬಳಕೆ ಮಾಡಿಕೊಂಡು ಈ ಪಾರ್ಕ್‌ನ ಜತೆಗೆ ಬಾಲವನದ ಅಭಿವೃದ್ಧಿ ಬಗ್ಗೆ ಮನಸ್ಸು ಮಾಡಬೇಕಾಗಿದೆ ಎನ್ನುವುದು ಸ್ಥಳೀಯರರು ಹಾಗೂ ಪ್ರವಾಸಿಗರ ಬೇಡಿಕೆಯಾಗಿದೆ. ಈಗಾಗಲೇ ಎಸ್.ಬಿ.ಎಂ 2ರಲ್ಲಿ 3 ಕೋಟಿ ರೂ. ಮಂಜೂರಾಗಿದ್ದು 2 ಕೋಟಿ 40 ಲಕ್ಷ ರೂ. ವೆಚ್ಚದಲ್ಲಿ ರಾಮ ಸಮುದ್ರ ಕೆರೆ ಅಭಿವೃದ್ಧಿಯಾಗಲಿದೆ. ಉಳಿದ 60 ಲಕ್ಷ ರೂ. ಪಾರ್ಕ್ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶವಿದ್ದು, ಹೊಸ ಪಾರ್ಕ್ ನಿರ್ಮಾಣವಾಗುತ್ತದೋ ಇಲ್ಲವೇ ಹಳೆಯ ಪಾರ್ಕ್ ಅಭಿವೃದ್ಧಿಯಾಗುತ್ತದೋ ಎನ್ನುವುದೇ ಪ್ರಶ್ನೆ.
ರಾಮ ಸಮುದ್ರದ ಬಳಿಯಲ್ಲಿ ಎಎನ್‌ಎಫ್ ವಸತಿ ಗೃಹವಾದ ಬಳಿಕ ಈ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಪಾರ್ಕ್ ಪಾಳುಬೀಳುವಂತಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ನೋಡಿಕೊಂಡು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತೇವೆ. -ಯೋಗೀಶ್ ದೇವಾಡಿಗ ಕಾರ್ಕಳ ಪುರಸಭಾ ಅಧ್ಯಕ್ಷ ವರ್ಷಗಳ ಹಿಂದೆ ನಿರ್ಮಾಣಗೊಂಡ ಪಾರ್ಕ್. ಈಗ ಪೊದೆಗಳಿಂದ ಆವೃತ್ತಗೊಂಡು ಉಪಯೋಗಕ್ಕೆ ಬಾರದಿರುವ ಬಗ್ಗೆ ಗಮನಕ್ಕೆ ಬಂದು ಈಗಾಗಲೇ ಸ್ಥಳ ವೀಕ್ಷಿಸಿದ್ದೇವೆ. ಮುಂದಿನ ದಿನಗಳಲ್ಲಿ ಅನುದಾನ ನೋಡಿಕೊಂಡು ಪಾರ್ಕ್ ಅಭಿವೃದ್ಧಿ ಬಗ್ಗೆ ಕ್ರಮ ವಹಿಸುತ್ತೇವೆ. -ರೂಪಾ ಟಿ.ಶೆಟ್ಟಿ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ https://www.vijayavani.net/baramadi-temple-brahma-kalashotsava https://www.vijayavani.net/ramayana-mahabharata-must-be-studied