

ಯಲ್ಲಾಪುರ: ರಾಮನ ಬದುಕು, ವ್ಯಕ್ತಿತ್ವ ಸಾರ್ವಕಾಲಿಕ ಆದರ್ಶವಾಗಿದೆ ಎಂದು ಖ್ಯಾತ ಅರ್ಥಧಾರಿ ವಾಸುದೇವ ರಂಗ ಭಟ್ಟ ಮಧೂರು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಯಲ್ಲಾಪುರ ಘಟಕದ ಆಶ್ರಯದಲ್ಲಿ ತಾಲೂಕಿನ ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬುಧವಾರ ‘ವರ್ತಮಾನ ಭಾರತದಲ್ಲಿ ಶ್ರೀರಾಮನ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದರು. ರಾಮನ ಸತ್ಯನಿಷ್ಠೆ, ನ್ಯಾಯಪರತೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಪರಿಷತ್ತು ವಿಧಾಯಕ ಕಾರ್ಯಕ್ರಮಗಳೊಂದಿಗೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ ಸಂಕದಗುಂಡಿ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ವಿಶ್ವೇಶ್ವರ ಗಾಂವಾರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್, ಗೌರವ ಕಾರ್ಯದರ್ಶಿಗಳಾದ ಸಂಜೀವಕುಮಾರ ಹೊಸ್ಕೇರಿ, ಜಿ.ಎನ್. ಭಟ್ ತಟ್ಟಿಗದ್ದೆ, ಕಸಾಪ ಸದಸ್ಯ ವಿಘ್ನೕಶ್ವರ ಭಟ್, ಗ.ರಾ.ಭಟ್ ಇತರರಿದ್ದರು.