

ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ. ಲಿಂಗರಾಜ ರಾಮಾಪೂರ ಅವರಿಗೆ ಭಾರತರತ್ನ, ವಿಜ್ಞಾನಿ ಸಿ.ಎನ್.ಆರ್. ರಾವ್ ಎಜ್ಯುಕೇಶನಲ್ ಫೌಂಡೇಷನ್ ವತಿಯಿಂದ ನೀಡಲಾಗುವ "ಔಟ್ ಸ್ಟ್ಯಾಂಡಿಂಗ್ ಶಿಕ್ಷಕ 2024' ಬಹುಮಾನ ಲಭಿಸಿದೆ.
ಜೂನ್ 30ರಂದು ಬೆಂಗಳೂರಿನ ಜವಾಹರಲಾಲ ನೆಹರು ವಿಜ್ಞಾನ ಸಂಶೋಧನಾ ಸಂಸ್ಥೆಯ ಸಿ.ಎನ್.ಆರ್. ರಾವ್ ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಳೆದ 27ವರ್ಷಗಳಿಂದ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ರಾಜ್ಯ ವಿಜ್ಞಾನ ಪರಿಷತ್ತಿನ ಸಕ್ರಿಯ ಕಾರ್ಯಕರ್ತರಾಗಿ ವಿಜ್ಞಾನವನ್ನು ಜನಪ್ರಿಯಗೊಳಿಸುತ್ತಿರುವ, ಶಿಕ್ಷಕರ ಬಳಗದಲ್ಲಿ ಸೈಂಟಿಸ್ಟ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಡಾ. ಲಿಂಗರಾಜ ರಾಮಾಪೂರ ಮಾರ್ಗದರ್ಶಿ ಶಿಕ್ಷಕರಾಗಿ, ಧಾರವಾಡ ಜಿಲ್ಲಾ ಸಮನ್ವಯಕಾರರಾಗಿ ಸೇವೆ ಸಲ್ಲಿಸಿದ್ದಾರೆ.
ಧಾರವಾಡ ಜಿಲ್ಲಾ ವಿಜ್ಞಾನ ಸಮಿತಿಯ ಅಧ್ಯಕ್ಷರಾಗಿ, ಬಿಜಿವಿಎಸ್ ಕೇಂದ್ರ ಸಮಿತಿಯ ಸದಸ್ಯರಾಗಿಯೂ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಹಲವಾರು ವೈಜ್ಞಾನಿಕ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿದ್ದಾರೆ.