ರಾಷ್ಟ್ರೀಯ ಸಮಾವೇಶದಲ್ಲಿ ರಾಮಣ್ಣವರಗೆ ಸತ್ಕಾರ

IMG-20240821-WA0044.jpg
Published on

ಬೆಳಗಾವಿ: ರಾಜಸ್ತಾನದ ಜೈಪುರದಲ್ಲಿ ಜೈನ ಸೋಷಿಯಲ್ ಗ್ರೂಪ್ ಕೇಂದ್ರೀಯ ಸಂಸ್ಥಾನ ಹಾಗೂ ನವದೆಹಲಿಯ ಮಹರ್ಷಿ ದಾದಿಚಿ ದೇಹದಾನ ಸಮಿತಿ ಆಶ್ರಯದಲ್ಲಿ ಆ.16ರಿಂದ 18ರವರೆಗೆ ನಡೆದ ರಾಷ್ಟ್ರೀಯ ದೇಹದಾನ ಮತ್ತು ಅಂಗಾಂಗ ದಾನ ಜಾಗೃತಿಯ ಸಮಾವೇಶದಲ್ಲಿ ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಅವರನ್ನು ಸಚಿವ ಹರ್ಷ ಮಲ್ಹೋತ್ರ ಸತ್ಕರಿಸಿದರು.

ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಅಲೋಕಕುಮಾರ್, ಕಮಲಕುಮಾರ್ ಸಚೇತಿ, ಡಾ ಸಂಜೀವ್ ಶರ್ಮಾ, ಡಾ.ಸುನೀಲ ಯಾದವ, ಕಲಬುರ್ಗಿಯ ಡಾ.ಶಿವಾನಂದ್ ಹೂಗಾರ ಇತರರಿದ್ದರು.

ಈ ಸಮಾವೇಶದಲ್ಲಿ ಮಾತನಾಡಿದ ಡಾ.ಮಹಾಂತೇಶ ರಾಮಣ್ಣವರ ಅವರು, ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ತಾವು ದೇಹದಾನ ಹಾಗೂ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕುರಿತು ಅನುಭವ ಹಂಚಿಕೊಂಡರು.

ಅಂಗರಚನಾ ಶಾಸ್ತ್ರದ ಕಾಯ್ದೆ ಪ್ರಕಾರ, ಮೃತದೇಹವನ್ನು ವೈದ್ಯಕೀಯ ಸಂಸ್ಥೆಗೆ ಸ್ವೀಕರಿಸುವಲ್ಲಿ ಕಾನೂನು ತೊಡಕುಗಳು, ಮರಣ ಪ್ರಮಾಣಪತ್ರದ ಪ್ರಾಮುಖ್ಯತೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಅವರು, ಅನೇಕ ಧಾರ್ಮಿಕ ಮುಖಂಡರು ತಮ್ಮ ದೇಹ, ಕಣ್ಣು ಮತ್ತು ಚರ್ಮವನ್ನು ದಾನವಾಗಿ ನೀಡಿ ನಮ್ಮ ಅಭಿಯಾನ ಬೆಂಬಲಿಸಿದ್ದಾರೆ ಎಂದು ಶ್ಲಾಘಿಸಿದರು.

ದೇಹದಾನದ ಜಾಗೃತಿಗಾಗಿ ನಾನು ನಮ್ಮ ತಂದೆಯವರ ಮೃತದೇಹವನ್ನೇ ಸ್ವತಃ ಛೇದಿಸಿರುವುದಾಗಿ ತಿಳಿಸಿದರು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ದೇಹ, ನೇತ್ರ ಮತ್ತು ಚರ್ಮದಾನ ಮಾಡಿ ದೇಶದ ಗಮನ ಸೆಳೆದಿದ್ದಾರೆ ಎಂದು ವಿವರಿಸಿದರು.

ದೇಶದ ಎಲ್ಲಾ ರಾಜ್ಯಗಳಿಂದ ಅನೇಕ ಎನ್‌ಜಿಒದವರು ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net